‘ಸರ್ಕಾರಿ ನೌಕರರ ಸಮಸ್ಯೆಗಳ ಇತ್ಯರ್ಥಕ್ಕೆ ಅಗತ್ಯ ಸಹಕಾರ’ : ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್


ಶಿವಮೊಗ್ಗ, ಆ. 27 : ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಹಿತ ಕಾಯುವಲ್ಲಿ, ವೇತನ, ಭತ್ಯೆ, ಬಡ್ತಿ ಮತ್ತಿತರ ವಿಷಯಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸುವಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಭರವಸೆ ನೀಡಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮೊದಲ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಆಗಾಗ್ಗೆ ಕೇಳಿಬರುತ್ತಿರುವ ಅರಣ್ಯ, ಆರೋಗ್ಯ ಮತ್ತು ಪಂಚಾಯತ್ರಾಜ್ ಇಲಾಖಾ ನೌಕರರ ಮೇಲಿನ ಹಲ್ಲೆಗಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಕರ್ತವ್ಯನಿತರ ಅಧಿಕಾರಿ ಹಾಗೂ ನೌಕರರ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಮೂಲಕ ಸಕರ್ಾರಿ ನೌಕರರು ನಿರ್ಭೀತಿಯಿಂದ ಸರ್ಕಾರಿ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಕ್ರಮ ವಹಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗುವುದು ಅಲ್ಲದೇ ದೌರ್ಜನ್ಯ ಎಸಗುವ ಪುಂಡರ ವಿರುದ್ಧ ಕಠಿಣಕ್ರಮ ವಹಿಸಲಾಗುವುದು ಎಂದವರು ನುಡಿದರು.
ಜಿಲ್ಲಾ ಮಟ್ಟದ ಇಲಾಖಾ ಮುಖ್ಯಸ್ಥರು ಕೆಲವು ವೃಂದಗಳ ಹುದ್ದೆಗಳಿಗೆ ಮುಂಬಡ್ತಿ, ಪದೋನ್ನತಿ ನೀಡುವಲ್ಲಿ ಇರುವ ವಿಳಂಬವನ್ನು ಸರಿಪಡಿಸಲು ಹಾಗೂ ತಾಲೂಕು ಮಟ್ಟದಲ್ಲಿ ಅಧಿಕಾರಿ ಮತ್ತು ಸಿಬ್ಬಂಧಿಗಳ ಸಭೆ ಕರೆದಯ ಸಕಾಲದಲ್ಲಿ ಜೇಷ್ಠತಾಪಟ್ಟಿಯನ್ನು ಪ್ರಕಟಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಈ ಎಲ್ಲಾ ಸಮಸ್ಯೆಗಳ ಬಗ್ಗೆ ವರದಿ ಪಡೆದು ಕ್ರಮವಹಿಸಲಾಗುವುದು ಎಂದರು.
ಅಲ್ಲದೇ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಾಲಮಿತಿ ವೇತನ ಬಡ್ತಿ, ಸ್ವಯಂಚಾಲಿತ ಹಾಗೂ ಹೆಚ್ಚುವರಿ ವೇತನ ಬಡ್ತಿ ಸೇರಿದಂತೆ ಇತರೆ ಸೇವಾ ಸೌಲಭ್ಯಗಳನ್ನು ಮಂಜೂರು ಮಾಡಲು ಸಕರ್ಾರ ಅಧಿಕಾರ ಪ್ರತ್ಯಾಯೋಜನೆ ಮಾಡಿದೆ. ಅಂತಹ ಅಧಿಕಾರ ಹೊಂದಿರುವ ಜಿಲ್ಲಾ ಮಟ್ಟದ ಕಚೇರಿಗಳು ನೌಕರರಿಗೆ ದೊರಬೇಕಾಗಿರುವ ಸೌಲಭ್ಯವನ್ನು ಕಾಲಮಿತಿಯಲ್ಲಿ ಮಂಜೂರು ಮಾಡಲು ಕ್ರಮ ವಹಿಸಲಾಗುವುದು. ಜಿಲ್ಲಾ ಮಟ್ಟದ ಅಧಿಕಾರಿಗಳು ಅವರ ಅಧೀನದಲ್ಲಿ ಬರುವ ತಾಲೂಕು ಮಟ್ಟದ ಕಚೇರಿಗಳಿಗೆ ಭೇಟಿ ನೀಡಿ ನೌಕರರ ಕುಂದು-ಕೊರತೆಗಳನ್ನು ಪರಿಹರಿಸಲು ಸಭೆ ನಡೆಸುವಂತೆಯೂ ಸೂಚಿಸಲಾಗುವುದು ಎಂದರು.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರೋಗ್ಯ, ಕಂದಾಯ, ಸಮಾಜ ಕಲ್ಯಾಣ ಹಾಗೂ ಸಂಬಂಧಿಸಿದ ಕೆಲವು ಇಲಾಖೆಗಳ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಅವರ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಇನ್ನಷ್ಟು ಸಿಬ್ಬಂಧಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಕರ್ತವ್ಯದಲ್ಲಿ ತೊಡಗಿರುವ ಎಲ್ಲಾ ಇಲಾಖೆಯ ಅಧಿಕಾರಿ ಹಾಗೂ ನೌಕರರಿಗೆ ರಕ್ಷಣೆ ನೀಡುವುದರ ಜೊತೆಗೆ ಗೌರವದಿಂದ ನಡೆಸಿಕೊಳ್ಳಲಾಗುವುದು ಎಂದರು.
ಈಗಾಗಲೇ ಗುರುಭವನ ನಿರ್ಮಾಣಕ್ಕೆ ಸರ್ಕಾರವು 2 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಿದ್ದು, ಸೆಪ್ಟಂಬರ್ 05ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಯಂದು ಭೂಮಿ ಪೂಜೆ ನೆರವೇರಿಸಲು ಅಗತ್ಯ ಕ್ರಮ ವಹಿಸುವಂತೆ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಂ.ರಮೇಶ್ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ದುರಸ್ತಿಯಲ್ಲಿರುವ ವಸತಿಗೃಹಗಳ ದುರಸ್ತಿಗಾಗಿ ಸರ್ಕಾರ 18 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಜಿಲ್ಲಾ ಕೇಂದ್ರದಂತೆಯೇ ತಾಲೂಕು ಕೇಂದ್ರದಲ್ಲಿನ ಕಟ್ಟಡಗಳ ದುರಸ್ತಿಗೂ ಗಮನಹರಿಸುವ ಅಗತ್ಯವಿದೆ ಎಂದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅಸ್ತಿತ್ವದ ದಾಖಲೆಗಳಿಲ್ಲವಾಗಿದೆ. ಈ ಕಟ್ಟಡಗಳಿಗೆ ಸಂಬಂಧಿಸಿದಂತೆ ಖಾತೆ ಮಾಡಿಸಿಕೊಟ್ಟಲ್ಲಿ ಸರ್ಕಾರದ ಆಸ್ತಿ ಉಳಿಸುವಲ್ಲಿ ಸಹಕಾರಿಯಾಗಲಿದೆ. ಅನೇಕ ಕಡೆಗಳಲ್ಲಿ ಶಾಲಾ ಜಾಗ ಒತ್ತುವರಿಯಾಗಿದ್ದು, ಆಸ್ತಿಯನ್ನು ಉಳಿಸಿಕೊಳ್ಳಲು ಮುಖ್ಯೋಪಾಧ್ಯಾಯರು ನ್ಯಾಯಾಲಯಲ್ಲಿ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಖಾಸಗಿ ಕಟ್ಟಡದಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೆಡೆ ಇರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಜಿಲ್ಲಾಧಿಕಾರಿಗಳು ಕ್ರಮ ವಹಿಸುವಂತೆ ಕೋರಿದ ಅವರು ಜಿಲ್ಲೆಯ ಅನೇಕ ತರಬೇತಿ ಕೇಂದ್ರಗಳಲ್ಲಿ ನಿರೀಕ್ಷೆಯಂತೆ ತರಬೇತಿಗಳು ನಡೆಯುತ್ತಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆಯೂ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಸಭೆಯಲ್ಲಿ ಸರ್ಕಾರಿ ನೌಕರರ ಕುರಿತಾದ ಅನೇಕ ವಿಷಯಗಳ ಕುರಿತು ಚರ್ಚೆ ನಡೆದವು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಅಪರ ಜಿಲ್ಲಾಧಿಕಾರಿ ಶ್ರೀಮತಿ ಜಿ.ಅನುರಾಧ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಧರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಂ.ರಮೇಶ್ ಸೇರಿದಂತೆ ನೌಕರರ ಸಂಘದ ತಾಲೂಕು ಘಟಕಗಳ ಅಧ್ಯಕ್ಷರು, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಆರ್.ಮೋಹನ್ಕುಮಾರ್, ಶಾಂತರಾಜ್ ಮುಂತಾದವರು ಉಪಸ್ಥಿತರಿದ್ದರು.