ಸರ್ಕಾರಿ ನೌಕರರ ಸಂಘದ ವಾರ್ಷಿಕ ನಿರ್ಧಾರ

ಕೋಲಾರ,ನ.೯:ಜಿಲ್ಲಾ ನೌಕರರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಡಿಸೆಂಬರ್ ಎರಡನೇ ವಾರದಲ್ಲಿ ಕರೆಯಲು ನಿರ್ಧರಿಸಿದ್ದು, ಇದನ್ನು ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದರು.
ಜಿಲ್ಲಾ ನೌಕರರ ಭವನದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ರಾಜ್ಯಮಟ್ಟದ ನೌಕರರ ಕ್ರೀಡಾಕೂಟದಲ್ಲಿ ಜಿಲ್ಲೆಯಿಂದ ಪಾಲ್ಗೊಂಡು ಗೆಲುವು ಸಾಧಿಸಿರುವ ಕ್ರೀಡಾಳು ನೌಕರರನ್ನು ಅಭಿನಂದಿಸಲು ದಿನಾಂಕ ನಿಗಧಿಗೆ ಸಭೆಯಲ್ಲಿ ಅಧ್ಯಕ್ಷ ಸುರೇಶ್‌ಬಾಬು ಮನವಿ ಮಾಡಿದಾಗ, ಕೆಲವು ಸದಸ್ಯರು ವಾರ್ಷಿಕ ಮಹಾಸಭೆಯಲ್ಲೇ ಅಭಿನಂದಿಸಲು ಸಲಹೆ ನೀಡಿದರು.
ವಾರ್ಷಿಕ ಮಹಾಸಭೆ ನಡೆಸಲು ತಗಲುವ ವೆಚ್ಚ, ಸಿದ್ದತೆಗಳು ಮತ್ತಿತರ ಕಾರ್ಯಗಳಿಗೆ ಪ್ರತ್ಯೇಕ ಸಮಿತಿಗಳನ್ನು ರಚಿಸಿ ಕಾರ್ಯೋನ್ಮುಕರಾಗಲು ಸಲಹೆ ನೀಡಿ, ಸಂಘದ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಲಾಯಿತು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಜಂಟಿ ಸಮಾಲೋಚನಾ ಸಮಿತಿ ಸಭೆಯಲ್ಲಿ ವಿವಿಧ ಇಲಾಖೆಗಳ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಮಾಹಿತಿಯನ್ನು ವೃಂದ ಸಂಘದ ಪದಾಧಿಕಾರಿಗಳು ಜಿಲ್ಲಾ ಸಂಘಕ್ಕೆ ಕೂಡಲೇ ತಲುಪಿಸಬೇಕು ಎಂದು ಮನವಿ ಮಾಡಿದರು.
ನೌಕರರಿಗೆ ಸಮಸ್ಯೆಗಳಿದ್ದರೆ ಕೂಡಲೇ ಜಿಲ್ಲಾ ಸಂಘದ ಪದಾಧಿಕಾರಿಗಳಿಗೆ ತಲುಪಿಸಿದರೆ ಜಂಟಿ ಸಮಾಲೋಚನಾ ಸಮಿತಿಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬಹುದು ಎಂದರು.
ಸುಸಜ್ಜಿತ ನೌಕರರ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಅನುದಾನ ಕ್ರೋಢೀಕರಿಸುವ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶಾಸಕರು,ವಿಧಾನಪರಿಷತ್ ಸದಸ್ಯರ ಸಭೆ ನಡೆಸಲು ಮನವಿಮಾಡಿ, ವಿವಿಧ ಕೈಗಾರಿಕೆಗಳ ಸಿಎಸ್‌ಆರ್ ನಿಧಿಯ ನೆರವನ್ನು ಪಡೆದುಕೊಳ್ಳಲು ಪ್ರಯತ್ನಿಸೋಣ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.ಈ ನಡುವೆ ಕೆಲವು ಸದಸ್ಯರು ವಿವಿಧ ಕಂಪನಿಗಳು,ಉಳ್ಳವರಿಂದ ನೆರವನ್ನು ನೇರವಾಗಿ ಸಂಘದ ಉಳಿತಾಯ ಖಾತೆಗೆ ಜಮಾ ಮಾಡಿಸುವ ರೀತಿಯಲ್ಲಿ ನೆರವು ಯಾಚಿಸಿ ಪಡೆದುಕೊಳ್ಳಲು ಸಲಹೆ ನೀಡಲಾಯಿತು.
ಹಣ ಸಂಗ್ರಹದಲ್ಲಿ ಯಾವುದೇ ಅನುಮಾನಗಳಿಗೆ ಅವಕಾಶವಿಲ್ಲದಂತೆ ಎಚ್ಚರವಹಿಸಬೇಕು ಮತ್ತು ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ಪದಾಧಿಕಾರಿಗಳು ಸಲಹೆ ನೀಡಿದಾಗ, ಅಧ್ಯಕ್ಷರು ಸಂಘಕ್ಕೆ ನೆರವಾಗಿ ಬರುವ ಯಾವುದೇ ಹಣ ನೇರವಾಗಿ ಖಾತೆಗೆ ಜಮಾ ಆಗಬೇಕು ನಗದು ಸ್ವೀಕರಿಸಲು ಅವಕಾಶವೇ ಇಲ್ಲ ಎಂದರು.
ಸಭೆಯಲ್ಲಿ ಸಂಘದ ಗೌರವಾಧ್ಯಕ್ಚ ಶ್ರೀನಿವಾಸರೆಡ್ಡಿ,ರಾಜ್ಯಪರಿಷತ್ ಸದಸ್ಯ ಗೌತಮ್, ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷರಾದ ಪುರುಷೋತ್ತಮ್, ಅಜಯ್, ಜಿಲ್ಲಾಕಾರ್ಯದರ್ಶಿ ಶಿವಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಪ್ಪಯ್ಯಗೌಡ, ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ಜಂಟಿ ಕಾರ್ಯದರ್ಶಿಗಳಾದ ಮಂಜುನಾಥ್, ಅರಣ್ಯ ಇಲಾಖೆ ಮಂಜುನಾಥ್, ಪಿಡಿಒ ನಾಗರಾಜ್,ಶ್ರೀನಿವಾಸಲು, ಮುಳಬಾಗಿಲು ತಾಲ್ಲೂಕು ಕಾರ್ಯದರ್ಶಿ ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.