ಸರ್ಕಾರಿ ನೌಕರರ ವೇತನ ಭತ್ಯೆ ಪರಿಷ್ಕರಿಸುವಂತೆ ಮನವಿ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜ.21: ರಾಜ್ಯ ಸರ್ಕಾರವು 7ನೇ ವೇತನ ಆಯೋಗದಿಂದ ಶೀಘ್ರ ವರದಿ ಪಡೆದು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳನ್ನು ಪೂರ್ಣಪ್ರಮಾಣದಲ್ಲಿ ಪರಿಷ್ಕರಿಸುವುದು ಹಳೆಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವುದು ಮತ್ತು ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ರವರಿಗೆ ಮನವಿ ಸಲ್ಲಿಸಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ ಮಾತನಾಡಿ ರಾಜ್ಯ ಸರ್ಕಾರವು 7ನೇ ವೇತನ ಆಯೋಗದಿಂದ ಶೀಘ್ರವಾಗಿ ವರದಿಯನ್ನು ಪಡೆದು ಈಗಾಗಲೇ ನೀಡಿರುವ 17% ಮಧ್ಯಂತರ ಪರಿಹಾರ ಭತ್ಯೆ ಸೇರಿದಂತೆ 40% ಫಿಟ್‍ಮೆಂಟನ್ನು ಸರ್ಕಾರಿ ನೌಕರರಿಗೆ ದಿನಾಂಕ 01-07-2022 ಜಾರಿಗೆ ಬರುವಂತೆ ಆದೇಶ ಹೊರಡಿಸಬೇಕು. ಅಲ್ಲದೇ ರಾಜ್ಯದ ಎನ್.ಪಿ.ಎಸ್ ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾಕಾಲದ ಬದುಕು ಕ್ಲಿಷ್ಟಕರವಾಗಿರುವುದರಿಂದ ಎನ್‍ಪಿಎಸ್ ನೌಕರರನ್ನು ಹಳೆ ಪಿಂಚಣಿ ಯೋಜನೆಯ ವ್ಯಾಪ್ತಿಗೆ ತರಬೇಕು. ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತೀಸ್‍ಘಡ, ಜಾರ್ಖಂಡ್, ಹಿಮಾಚಲ ಪ್ರದೇಶಗಳಲ್ಲಿ ಹಳೆಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವಂತೆ ಇಲ್ಲಿಯೂ ಸಹ ಹಳೆಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು ಮತ್ತು ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದುರಹಿತ ಶಸ್ತ್ರಚಿಕಿತ್ಸೆ ನೀಡುವ ಆರೋಗ್ಯ ಸಂಜೀವಿನಿ ಯೋಜನೆಯನ್ನು ಕೂಡಲೇ ಜಾರಿಗೊಳಿಸುವುದು ಸರ್ಕಾರಿ ನೌಕರರ ಸಂಘದ ಪ್ರಮುಖ ಬೇಡಿಕೆಗಳಾಗಿದ್ದು ಈಗಾಗಲೇ ಸಾಕಷ್ಟು ವಿಳಂಬವಾಗಿರುವುದರಿಂದ ಕೂಡಲೇ ತಮ್ಮ ಮನವಿಯನ್ನು ಪರಿಗಣಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಲು ತಾಲೂಕಿನ ಎಲ್ಲಾ ನೌಕರರ ಪರವಾಗಿ ಮನವಿ ಪತ್ರ ಸಲ್ಲಿಸುತ್ತಿದ್ದೇನೆ ಎಂದರು.
ಸರ್ಕಾರಿ ನೌಕರರ ಸಂಘದ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಮಾತನಾಡಿ ಸರ್ಕಾರದ ಮಹತ್ತರವಾದ ಯೋಜನೆಗಳನ್ನು ಅನುಷ್ಟಾನಗೊಳಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಅಪಾರವಾದುದು. ಅವರಿಗೆ ಕಾಲಕಾಲಕ್ಕೆ ನೀಡಬೇಕಾದ ವೇತನ, ಭತ್ಯೆ ಮುಂತಾದುವುಗಳನ್ನು ಯಾವುದೇ ಸರ್ಕಾರವಿರಲಿ ನೀಡಬೇಕಾದುದು ಆ ಸರ್ಕಾರದ ಕರ್ತವ್ಯ. ಈ ಮನವಿಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸುವ ಮೂಲಕ ಅವರೊಂದಿಗೆ ಮಾತನಾಡುತ್ತೇನೆ. ನಾನು ಯಾವಾಗಲೂ ಸರ್ಕಾರಿ ನೌಕರರರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತೇನೆ ಎಂದು ತಿಳಿಸಿದರು.
ಈ ವೇಳೆ ತಾಲೂಕು ಸರ್ಕಾರಿ ನೌಕರರ ಸಂಘದ ರಾಜ್ಯಪರಿಷತ್ ಸದಸ್ಯ ಹೆಚ್.ಕೆ.ಮಂಜುನಾಥ್, ಕಾರ್ಯದರ್ಶಿ ಪಿ.ಜೆ.ಕುಮಾರ್, ಖಜಾಂಚಿ ಕೃಷ್ಣಮೂರ್ತಿ, ಹಿರಿಯ ಉಪಾಧ್ಯಕ್ಷ ಎಸ್.ಆರ್.ಆನಂದ್‍ಕುಮಾರ್, ಹರೀಶ್, ಸೇರಿದಂತೆ ಹಲವರಿದ್ದರು.