ಸರ್ಕಾರಿ ನೌಕರರ ಮುಷ್ಕರಕ್ಕೆ ಬಿ ಎಸ್ ಪಿ ಬೆಂಬಲ

ಗುರುಮಠಕಲ್:ಫೆ.28:ಏಳನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರುಗಳ ಸಂಘ ಹಮ್ಮಿಕೊಂಡಿರುವ ಮುಷ್ಕರವನ್ನು ಬಹುಜನ ಸಮಾಜ ಪಾರ್ಟಿ ಬೆಂಬಲಿಸುತ್ತದೆ.
ಕೂಡಲೇ ಸರ್ಕಾರವು ಸರ್ಕಾರಿ ನೌಕರರ ಬೇಡಿಕೆಯನ್ನು ಈಡೇರಿಸಬೇಕೆಂದು ಬಿ ಎಸ್ ಪಿ ಆಗ್ರಹಿಸುತ್ತದೆ.
ಬಜೆಟ್ಟಿಗೆ ಮೊದಲು ಸರ್ಕಾರಿ ನೌಕರರ ಸಂಘದ ಜೊತೆ ಮಾತುಕತೆ ನಡೆಸಿದ್ದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಬಜೆಟ್ ಮಂಡಿಸುವಾಗ 7 ನೇ ವೇತನ ವರದಿ ಜಾರಿಗೆ ಸಂಬಂಧಿಸಿದಂತೆ ಕೇವಲ 6,000 ಕೋಟಿ ರೂಪಾಯಿಗಳನ್ನು ಕಾಯಿದಿರಿಸಿರುವುದಾಗಿ ಘೋಷಣೆ ಮಾಡಿದ್ದರು.
ಆದರೆ ಬಜೆಟ್ ನ ಪ್ರತಿಗಳಲ್ಲಿ ಈ ಘೋಷಣೆಗೆ ಸಂಬಂಧಿಸಿದ ವಿಚಾರ ದಾಖಲಾಗಿಲ್ಲ.
ಆ ಮೂಲಕ ಮುಖ್ಯಮಂತ್ರಿ ಸದನದಲ್ಲಿ ಸುಳ್ಳು ಹೇಳಿದ್ದರು ಎಂಬುದು ಸಾಬೀತಾಗಿದೆ.
ಈಗಾಗಲೇ ಸರ್ಕಾರದಲ್ಲಿ ಖಾಲಿ ಇರುವ ಎರಡುವರೆ ಲಕ್ಷ ಹುದ್ದೆಗಳ ಕಾರ್ಯಭಾರವನ್ನು ಈಗಿರುವ ನೌಕರರೇ ಹೆಚ್ಚುರಿಯಾಗಿ ನಿರ್ವಹಿಸುತ್ತಿದ್ದಾರೆ.
ಸರ್ಕಾರಿ ನೌಕರರು ಈ ಹೆಚ್ಚುವರಿ ಕಾರ್ಯ ಭಾರದಿಂದಾಗಿ ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ.
ಆದ್ದರಿಂದ ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದರ ಮುಖಾಂತರ ಈ ಅಧಿಕ ಕಾರ್ಯದ ಹೊರೆಯನ್ನು ಇಳಿಸಬೇಕು ಹಾಗೂ ರಾಜ್ಯದ ಯುವಜನತೆಗೆ ಉದ್ಯೋಗ ಕಲ್ಪಿಸಬೇಕು ಎಂದು ಬಹುಜನ ಸಮಾಜ ಪಾರ್ಟಿ ಒತ್ತಾಯಿಸುತ್ತದೆ.
ಇನ್ನು ಈಗಾಗಲೇ ಪಂಜಾಬ್ ರಾಜಸ್ಥಾನ ಛತ್ತೀಸ್ಗಡದಂತ ರಾಜ್ಯಗಳು ತಮ್ಮ ಸರ್ಕಾರಿ ನೌಕರಿಗೆ ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು ರಾಜ್ಯದಲ್ಲೂ ಸಹ ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಬೇಕು.
ಹಾಗೆಯೇ ಕಳೆದ ಹಲವಾರು ದಿವಸಗಳಿಂದ ಎನ್ ಹೆಚ್ ಎಂ ನೌಕರರು ತಮ್ಮನ್ನು ಕಾಯಂ ಗೊಳಿಸಬೇಕೆಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಸುತ್ತಿದ್ದಾರೆ.
ಈಗಾಗಲೇ ಪಂಜಾಬ್ ಸೇರಿದಂತೆ ಹಲವಾರು ರಾಜ್ಯಗಳು ಎನ್ ಹೆಚ್ ಎಂ ನೌಕರರನ್ನು ಕಾಯಂಗೊಳಿಸಲು ಮುಂದಾಗಿವೆ.
ಅದೇ ರೀತಿ ರಾಜ್ಯ ಸರ್ಕಾರವು ಸಹ ಎನ್ ಹೆಚ್ ಎಂ ನೌಕರರನ್ನು ಖಾಯಂ ಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಬಿ ಎಸ್ ಪಿ ಆಗ್ರಹಿಸುತ್ತದೆ.
ಜೊತೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಬೇಡಿಕೆಯನ್ನು ಈಡೇರಿಸ ಬೇಕು.
ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಆರೋಗ್ಯ ಮತ್ತು ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಹಲವಾರು ತಿಂಗಳುಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದಾರೆ. ತಕ್ಷಣ ಅವರ ಬೇಡಿಕೆಯನ್ನು ಮಾನವೀಯ ದೃಷ್ಟಿಯಿಂದ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು. ಬಿ ಎಸ್ ಪಿ ಒತ್ತಾಯಿಸುತ್ತದೆ.
ಹಾಗೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನದ ನಡುವೆ ಅಗಾಧವಾದ ಅಂತರವಿದ್ದು ತಕ್ಷಣ ರಾಜ್ಯ ಸರ್ಕಾರವು ವೇತನ ತಾರತಮ್ಯವನ್ನು ನಿವಾರಿಸಬೇಕು.
ನೌಕರರ ವೇತನ ಮತ್ತು ಪಿಂಚಣಿ ವಿಚಾರ ಬಂದಾಗ ಸರ್ಕಾರವು ಆರ್ಥಿಕ ಹೊರೆ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುವುದು ಸರಿಯಲ್ಲ.
ಸರ್ಕಾರದ 40% ಕಮಿಷನ್ ವ್ಯವಹಾರವನ್ನು ಮಟ್ಟ ಹಾಕಿದರೆ ಹಾಗೂ ಅನಗತ್ಯ ದುಂದು ವೆಚ್ಚಗಳಿಗೆ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಬಹುದು.
ನೌಕರರ ಬೇಡಿಕೆ ಈಡೇರಿಕೆ ವಿಚಾರದಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟವಾಗಲಿದೆ ಎಂದು ಬಿ ಎಸ್ ಪಿ ಎಚ್ಚರಿಸುತ್ತದೆ.