ಸರ್ಕಾರಿ ನೌಕರರ ಮುಷ್ಕರ,ಎಲ್ಲಾ ಕಚೇರಿಗಳು ಖಾಲಿ ಖಾಲಿ

ವಿದ್ಯಾರ್ಥಿಗಳ ಪರೀಕ್ಷೆ ಮುಂದೂಡಿಕೆ
ರಾಯಚೂರು, ಮಾ.೧- ೭ನೇ ವೇತನ ಆಯೋಗ ಜಾರಿ ಹಾಗೂ ನೂತನ ಪಿಂಚಣಿ ಪದ್ಧತಿ (ಎನ್’ಪಿಎಸ್) ರದ್ದು ಮಾಡಬೇಕೆಂದು ಆಗ್ರಹಿಸಿ ಸರ್ಕಾರಿ ನೌಕರರ ಸಂಘ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ಸರಕಾರಿ ನೌಕರರು ಗೈರು ಹಾಜರಾಗಿದ್ದರಿಂದ ಸರ್ಕಾರಿ ಕಚೇರಿಗಳು ಬಿಕೋ ಎನ್ನುತ್ತಿವೆ.
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ ಸೇವೆಗಳು ಬಹುತೇಕ ಬಂದ್ ಆಗಿದೆ.ಜಿಲ್ಲಾಧಿಕಾರಿ ಕಚೇರಿ ತಹಶೀಲ್ದಾರ್ ಕಚೇರಿ ಸೇರಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನೌಕರರು ಸ್ವಯಂ ಪ್ರೇರಿತ ರಜೆ ಮಾಡಿದ್ದು, ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಶಾಲಾ ಮಕ್ಕಳಲ್ಲಿ ಆರಂಭದಲ್ಲಿ ಗೊಂದವಿದ್ದು, ನಂತರ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ನಗರದ ರಿಂಗ್ಸ್ ಆಸ್ಪತ್ರೆಯಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ ಯಾವುದೇ ಸೇವೆಗಳನ್ನ ನೀಡುತ್ತಿಲ್ಲ,ಶಾಲಾ ಕಾಲೇಜುಗಳ ಸಿಬ್ಬಂದಿಗಳು ಕೂಡ ಪ್ರತಿಭಟನೆಗೆ ಸಾತ್ ನೀಡಿರುವ ಹಿನ್ನೆಲೆಯಲ್ಲಿ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗಳು ಮತ್ತು ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಯಿತು.
ಸರ್ಕಾರಿ ನೌಕರರ ಹೋರಾಟದ ಮಧ್ಯ ಇಂದು ರಾಯಚೂರು ನಗರ ಸಭೆಯ ೨೦೨೩ ೨೪ನೇ ಬಜೆಟ್ ಮಂಡನೆಯೂ ಕೂಡ ಜರುಗಿತು. ಈ ವೇಳೆ ಸಿಬ್ಬಂದಿಗಳು ಹೋರಾಟಗಾರರ ಬಳಿ ೨ ಗಂಟೆಗಳ ಕಾಲ ಪರವಾನಿಗೆಯನ್ನು ಪಡೆದು ಅಲ್ಲಿನ ನಗರಸಭೆ ಸದಸ್ಯರು ಎಲ್ಲರಿಗೆ ಎರಡು ಗಂಟೆಯೊಳಗೆ ಬಜೆಟ್ ಮಂಡನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಒತ್ತಾಯಿಸಿ ಬಜೆಟ್ ಮಂಡನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.