
ಶಿವಮೊಗ್ಗ, ಡಿ. 25: ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಿ ನೌಕರರು ಶಕ್ತಿ ಮೀರಿ ಕರ್ತವ್ಯ ನಿರ್ವಹಿಸಿದ್ದೀರಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶುಕ್ರವಾರ ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘ, ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ, ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಇವುಗಳ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಬದ್ಧವಾಗಿರುವ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸದಾ ಸಿದ್ಧವಿದೆ. ಯಾವುದೇ ಸಮಸ್ಯೆಯನು ಕೂಡಾ ಪರಿಹರಿಸುವ ನಿಟ್ಟಿನಲ್ಲಿ ನಿಮ್ಮ ಕಾರ್ಯವೈಖರಿ ಪ್ರಶಂಸನೀಯ. ಎಂತಹ ವಿಷಮ ಪರಿಸ್ಥಿತಿಯಲ್ಲಿಯೂ ಕೂಡಾ ಎದೆಗುಂದದೇ ಕರ್ತವ್ಯ ನಿರ್ವಹಿಸುತ್ತಿರುವ ನಿಮ್ಮ ಸೇವೆ ಮೆಚ್ಚುವಂತದ್ದು ಎಂದರು.
ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸರ್ಕಾರದ ಭಾಗವಾಗಿರುವ ಸರ್ಕಾರಿ ನೌಕರರ ಸೇವೆ ಜನಸಾಮಾನ್ಯರಿಗೆ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸರ್ಕಾರಿ ನೌಕರನೂ ಕೂಡಾ ಅತ್ಯಂತ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ನಾಡು ಕಟ್ಟುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಂತಹ ಕಾರ್ಯವನ್ನು ನೌಕರ ವರ್ಗದವರು ಅತ್ಯಂತ ಶ್ರಮ ವಹಿಸಿ ಮಾಡುತ್ತಿರುವುದರಿಂದ ಯೋಜನೆಗಳು ಯಶಸ್ವಿಯಾಗಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನೌಕರ ಸಮೂಹವನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ವಿಷಮ ಪರಿಸ್ಥಿತಿಯಲ್ಲಿಯೂ ಸಹ ನೌಕರ ವರ್ಗದವರು ಹಗಲು, ರಾತ್ರಿ ಎನ್ನದೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ನಂತಹ ಸಂಕಷ್ಟ ಸಂದರ್ಭದಲ್ಲಿ ನೌಕರ ವರ್ಗ ಸಲ್ಲಿಸಿದ ಸೇವೆಯಿಂದಾಗಿಯೇ ಕೊರೋನಾ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿದೆ ಎಂದ ಅವರು, ನೈಸರ್ಗಿಕ ವಿಕೋಪದ ಪರಿಸ್ಥಿತಿಯಲ್ಲಿ ಪರಿಸ್ಥಿತಿಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿಯೂ ಸಹ ನೌಕರರ ವರ್ಗ ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸರ್ಕಾರಿ ನೌಕರರ ಸೌಹಾರ್ಧ ಸಹಕಾರಿ ಸೊಸೈಟಿಯಲ್ಲಿ ಅರ್ಜಿ ಸಲ್ಲಿಸಿದ ಒಂದು ಗಂಟೆಯೊಳಗೆ ೫ ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಈ ವರ್ಷ ೪೦ ಕೋಟಿ ರೂ. ವ್ಯವಹಾರ ನಡೆಸಲಾಗಿದೆ. ನೌಕರರಿಗಾಗಿ ೨೨ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ನೌಕರರಿಗೆ ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸಲಾಗಿದೆ. ಜ.೧ರಿಂದ ಕೆಜಿಐಡಿ ಸಂಪೂರ್ಣ ಗಣಕೀಕರಣಗೊಳ್ಳಲಿದೆ. ಕೇಂದ್ರದ ಮಾದರಿಯ ವೇತನವನ್ನು ಮುಂದಿನ ದಿನಗಳಲ್ಲಿ ಪಡೆದೇ ಪಡೆಯುತ್ತೇವೆ. ಅಲ್ಲದೆ ಎನ್ಪಿಎಸ್ನ್ನು ರದ್ದುಗೊಳಿಸುವ ನಿಟ್ಟಿಲ್ಲಿ ಸರ್ಕಾರದೊಂದಿಗೆ ಮಾತುಕತೆ ನಡೆದಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ಜಿಪಂ ಸಿಇಓ ಎಂ.ಎಲ್.ವೈಶಾಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗೇಗೌಡ, ನೌಕರರ ಸಂಘದ ಜಿಲ್ಲಾ ಪ್ರಮುಖರಾದ ಕೆ.ಎಂ.ಶಾಂತರಾಜು, ಮೋಹನ್ಕುಮಾರ್, ಮಾರುತಿ ಮೊದಲಾದವರಿದ್ದರು.