ಸರ್ಕಾರಿ ನೌಕರರ ಕ್ಯಾಂಟೀನ್‍ಗೆ ಚಾಲನೆ

ಚಾಮರಾಜನಗರ, ನ.07- ಚಾಮರಾಜನಗರ ಜಿಲ್ಲಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ನೂತನವಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ನಿರ್ಮಿಸಿರುವ ಸರ್ಕಾರಿ ನೌಕರರ ಕ್ಯಾಂಟಿನ್‍ಗೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಸರ್ಕಾರಿ ನೌಕರರಿಗೆ ಕ್ಯಾಂಟಿನ್ ನಿರ್ಮಿಸಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಕ್ಯಾಂಟಿನ್‍ನನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಳಿಸಿ ನಿರ್ವಹಿಸಿಕೊಂಡು ಹೋಗಬೇಕು. ಸರ್ಕಾರಿ ನೌಕರರಿಗೆ ಅನುಕೂಲವಾಗುವಂತೆ ಕೆಲಸವನ್ನು ನೌಕರರ ಸಂಘವು ಮಾಡಬೇಕು ಎಂದು ಸಲಹೆ ಮಾಡಿದರು.
ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಕಟ್ಟಡದ ಆವರಣದಲ್ಲಿ ಶಾಸಕರ ಅನುದಾನದಲ್ಲಿ ಶುದ್ಧ ನೀರಿನ ಕುಡಿಯುವ ಘಟಕವನ್ನು ನಿರ್ಮಿಸಲು ಸಹಕಾರವನ್ನು ನೀಡಲಾಗುವುದು. ಜಿಲ್ಲಾ ನೌಕರರು ಎದುರಿಸುತ್ತಿರುವ ಸಮಸ್ಯೆಯನ್ನು ರಾಜ್ಯಾಧ್ಯಕ್ಷರು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ಪ್ರೌವೃತ್ತರಾಗಬೇಕು. ಹೀಗೆ ಸಂಘಟನೆಯು ಯಶಸ್ಸು ಸಾಧಿಸಲಿ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿ ಅವರು ಸರ್ಕಾರಿ ನೌಕರರ ಕ್ಯಾಂಟಿನ್‍ಅನ್ನು ಎಲ್ಲ ಜಿಲ್ಲೆಯಲ್ಲಿಯೂ ಮಾದರಿ ಕ್ಯಾಂಟಿನ್ ಆಗಿ ಮಾಡಲು ಇಂದಿನ ಕಾರ್ಯಕ್ರಮವು ಪ್ರೇರಣೆಯಾಗಿದೆ. ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ಪ್ರಾರಂಭವಾಗಿರುವ ದಿನಸಿ ಮತ್ತು ಗೃಹಬಳಕೆಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು, ನೌಕರರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ನೆರವು ಒದಗಿಸಲು ಪ್ರಯತ್ನಿಸುತ್ತೇನೆ. ಸರ್ಕಾರಿ ನೌಕರರ ಸೌಲಭ್ಯಗಳು, ಆರೋಗ್ಯ ಸೇವೆಗಳು, ವಿಮಾ ಯೋಜನೆಗಳ ಸಂಬಂಧ ಕಾರ್ಯನಿರ್ವಹಿಸಲಾಗುತ್ತಿದೆ. ನೌಕರರಿಗೆ ಆನ್‍ಲೈನ್ ತರಬೇತಿ ಆರಂಭಿಸಲಾಗುತ್ತಿದೆ ಎಂದು ಸಿ.ಎಸ್ ಷಡಾಕ್ಷರಿ ಅವರು ಹೇಳಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ ಗೌಡಪ್ಪ ಪಾಟೀಲ್ ಅವರು ಮಾತನಾಡಿ ಸರ್ಕಾರಿ ನೌಕರರ ಕ್ಯಾಂಟಿನ್‍ಅನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ದಿನ ಬಳಕೆಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದ್ದು, ಎಲ್ಲಾ ಸರ್ಕಾರಿ ನೌಕರ ಬಂಧುಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ್ ಅವರು ಜಿಲ್ಲೆಯಲ್ಲಿ ಸಂಘವು ರಕ್ತದಾನ ಶಿಬಿರ, ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ, ಕ್ರೀಡಾಕೂಟ ಸೇರಿದಂತೆ ಅನೇಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನೌಕರರ ಹಿತ ಕಾಪಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಟಿ ಜವರೇಗೌಡ, ನಗರಸಭೆ ಆಯುಕ್ತ ರಾಜಣ್ಣ, ಖಜಾಂಚಿ ಆರ್. ಶ್ರೀನಿವಾಸ್, ಗೌರವ ಅಧ್ಯಕ್ಷರಾದ ವಿ.ವಿ. ಶಿವರುದ್ರಯ್ಯ, ಬೆಂಗಳೂರು ಸಾಯಿ ಇಂಟರ್ ನ್ಯಾಷನಲ್ ಸಂಸ್ಥಾಪಕರಾದ ಎಸ್. ಪ್ರಸಾದ್ ಅವರು ಹಾಜರಿದ್ದರು.