ಸರ್ಕಾರಿ ನೌಕರರಿಗೆ ಕ್ರೀಡಾ ತರಬೇತಿ: ರಾಜೇಂದ್ರಕುಮಾರ ಗಂದಗೆ

ಬೀದರ್:ಸೆ.21: ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಿಗೆ ಆಯ್ಕೆಯಾದ ಜಿಲ್ಲೆಯ ಸರ್ಕಾರಿ ನೌಕರರಿಗೆ ವಿಶೇಷ ತರಬೇತಿ ನೀಡಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.
ಅಖಿಲ ಭಾರತ ನಾಗರಿಕ ಸೇವಾ ಹಾಕಿ ಪಂದ್ಯಾವಳಿಯ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವ ಜಿಲ್ಲೆಯ ಎಂಟು ಸರ್ಕಾರಿ ನೌಕರರಿಗೆ ಇಲ್ಲಿಯ ಗುಂಪಾ ರಸ್ತೆಯಲ್ಲಿ ಇರುವ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಸರ್ಕಾರಿ ನೌಕರರು ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮೆರೆಯಬೇಕು. ನೌಕರರಿಗೆ ಅಗತ್ಯ ಸಹಕಾರ ನೀಡಲು ಸಂಘ ಸದಾ ಸಿದ್ಧ ಇದೆ ಎಂದು ತಿಳಿಸಿದರು.
ಹರಿಯಾಣಾದ ಕುರುಕ್ಷೇತ್ರದಲ್ಲಿ ಸೆ. 23 ರಿಂದ 30 ರ ವರೆಗೆ ನಡೆಯಲಿರುವ ಅಖಿಲ ಭಾರತ ನಾಗರಿಕ ಸೇವಾ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ತಂಡಕ್ಕೆ ಜಿಲ್ಲೆಯಿಂದ ಮೊದಲ ಬಾರಿಗೆ ಎಂಟು ಜನ ಸರ್ಕಾರಿ ನೌಕರರು ಆಯ್ಕೆಯಾಗಿರುವುದು ಅತೀವ ಸಂತಸ ಉಂಟು ಮಾಡಿದೆ. ಇದು, ಜಿಲ್ಲೆಯ ಸರ್ಕಾರಿ ನೌಕರರ ಕ್ರೀಡಾ ಆಸಕ್ತಿ, ಕ್ರೀಯಾಶೀಲತೆಗೆ ನಿದರ್ಶನವಾಗಿದೆ ಎಂದು ಹೇಳಿದರು.
ಕೋವಿಡ್ ಸೋಂಕಿನ ಕಾರಣ ಪ್ರಸಕ್ತ ವರ್ಷ ಬೀದರ್‍ನಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ನಡೆಸಲು ಸಾಧ್ಯವಾಗಲಿಲ್ಲ. ಮುಂಬರುವ ವರ್ಷಗಳಲ್ಲಿ ಜಿಲ್ಲೆಯಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಸಂಘಟಿಸಲು ಪ್ರಯತ್ನಿಸಲಾಗುವುದು
ಎಂದು ತಿಳಿಸಿದರು.
ಕರ್ನಾಟಕ ಹಾಕಿ ತಂಡಕ್ಕೆ ಆಯ್ಕೆಯಾದ ಜಿಲ್ಲೆಯ ಸರ್ಕಾರಿ ನೌಕರರಾದ ಸೈಯದ್ ಬಾಬರ್ ಹುಸೇನ್, ಎಂ.ಡಿ. ನಜೀಬುದ್ದಿನ್, ಶೇಕ್ ಮಸಿವುದ್ದಿನ್, ಸುಹೇಲ್ ಅಹಮ್ಮದ್, ಸೈಯದ್ ಉಮರ್ ಅಲಿ, ಝೀಶಾನ್ ಅಹಮ್ಮದ್, ಬಸವಪ್ರಭು, ಹಾಗೂ ಪೀಟರ್ ಪೌಲ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಉಪಾಧ್ಯಕ್ಷ ಮಾಣಿಕರಾವ್ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಕಾರ್ಯದರ್ಶಿ ಮನೋಹರ ಕಾಶಿ, ನಿರ್ದೇಶಕರಾದ ಶಿವಶಂಕರ ಟೋಕರೆ, ಸೋಹೆಲ್, ಅನ್ಸರ್ ಬೇಗ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಶಿವರಾಜ ಕಪಲಾಪುರೆ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ಸರ್ಕಾರಿ ಮುಖ್ಯಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭೀಮರಾವ್ ಹಡಪದ ಇದ್ದರು.