ಸರ್ಕಾರಿ ಜಾಗ, ರಾಜಕಾಲುವೆ,ಉದ್ಯಾನವನ  ಒತ್ತುವರಿ;  ತೆರವಿಗೆ ಡಿಸಿಗೆ ಮನವಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧; ನಗರದಲ್ಲಿ ಕೆಲವು ಪ್ರಭಾವಶಾಲಿಗಳು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ, 33 ಕೆ.ವಿ., 66 ಕೆ.ವಿ. ಹೈಟೆನ್ಷನ್ ಮಾರ್ಗದ ಕೆಳಗೆ ಇರುವ ಜಾಗಗಳಿಗೆ ಕೆಲವರು ಅಕ್ರಮವಾಗಿ ಡೋರ್ ನಂಬರ್ ತೆಗೆದುಕೊಂಡಿದ್ದಾರೆ. ಕೆಲವು ಬಡಾವಣೆಗಳಲ್ಲಿ ಸರ್ಕಾರಿ ಜಾಗ ಹಾಗೂ ಉದ್ಯಾನವನಗಳ ಜಾಗಗಳನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಒತ್ತುವರಿ ತೆರವು ಮಾಡಬೇಕೆಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು.ಈ ವೇಳೆ ವೇದಿಕೆ ರಾಜ್ಯಾಧ್ಯಕ್ಷ ಕೆ.ಜಿ ಯಲ್ಲಪ್ಪ ಮಾತನಾಡಿರಾಜ್ಯಸರ್ಕಾರಕ್ಕೆ ಸೇರಿದ ಸಾವಿರಾರು ಕೋಟಿ ರೂ ಆಸ್ತಿ ಕಂಡವರ ಪಾಲಾಗಿದೆ. ನಗರ ವ್ಯಾಪ್ತಿಯಲ್ಲಿ ಹಲವರು ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಮಹಾನಗರಪಾಲಿಕೆ ಆಯುಕ್ತರು ಹಾಗೂ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರುಗಳು ತೆರವು ಮಾಡಿಸದೇ ಇರುವುದು ಖಂಡನೀಯ, ರಾಜಕಾಲುವೆಗಳಿಗೆ ಸೇರಿದ ಜಾಗವನ್ನು ಕೆಲವು ಸಂಸ್ಥೆಗಳು ತಮ್ಮ ಖಾಸಗಿ ಆಸ್ತಿಯನ್ನಾಗಿ ಮಾಡಿಕೊಂಡಿದ್ದು ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ನಗರಪಾಲಿಕೆಯ ಕೆಲವು ಅಧಿಕಾರಿಗಳು ಹಾಗೂ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕೆಲವು ಅಧಿಕಾರಿಗಳು, ಖಾಸಗಿ ಬಡಾವಣೆಗಳ ಮಾಲೀಕರ ಜೊತೆಗೆ ಶಾಮೀಲಾಗಿ ಬಡಾವಣೆಗಳಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಜಾಗಗಳಿಗೆ ಆಕ್ರಮವಾಗಿ ಡೋರ್ ನಂಬರ್‌ ನೀಡಿದ ಪ್ರಕರಣಗಳಿವೆ. ಕೆಎಸ್‌ಆರ್‌ಟಿಸಿ ಬಸ್‌ ಸ್ಟಾಂಡ್ ಪಕ್ಕದಲ್ಲಿರುವ  ಹೊಟೇಲೊಂದರ ಮಾಲೀಕರು ರಾಜಕಾಲುವೆ ಜಾಗವನ್ನು ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಿಸಿಕೊಂಡು ತಮ್ಮ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ.ಆದ್ದರಿಂದ  ಇಂತಹ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ, ಸರ್ಕಾರಿ ಜಾಗಗಳನ್ನು ಸರ್ಕಾರದ ವಶಕ್ಕೆ ಮರಳಿ ಪಡೆಯಬೇಕೆಂದು ಒತ್ತಾಯಿಸಿದರು.
ಈ ವೇಳೆ ಕೆ.ಹೆಚ್ ಮಹಬೂಬ್,ದಯಾನಂದ,ಸಂತೋಷ್ ದೊಡ್ಮನಿ,ಸಿದ್ದೇಶ್.ಎಸ್,ಗದಿಗೆಪ್ಪ,ಅಮ್ಜದ್ ಅಲಿ,ಎಂ.ರವಿ,ಬಾಬುರಾವ್,ಜಿ.ರಮೇಶ್ ಮತ್ತಿತರರಿದ್ದರು.