ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಅಭಿಯಾನ

(ಸಂಜೆವಾಣಿ ಪ್ರತಿನಿಧಿಯಿಂದ)


ಬೆಂಗಳೂರು, ಜು. ೧೨- ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡಲು ವಿಶೇಷ ಅಭಿಯಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿಧಾನ ಪರಿಷತ್ತಿನಲ್ಲಿಂದು ತಿಳಿಸಿದರು.
ಪ್ರತಿ ತಿಂಗಳು ಅಧಿಕಾರಿಗಳಿಗೆ ಗುರಿ ನಿಗದಿ ಮಾಡಿ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ಮರಳಿ ಸರ್ಕಾರದ ವಶಕ್ಕೆ ಪಡೆದು ಅದಕ್ಕೆ ಬೇಲಿ ಹಾಕಲಾಗುವುದು. ಜತೆಗೆ ಒತ್ತುವರಿ ತೆರವುಗೊಳಿಸಿರುವ ಜಮೀನನ್ನು ಮತ್ತೆ ಒತ್ತುವರಿ ಮಾಡಿಕೊಳ್ಳದಂತೆ ಅಧಿಕಾರಿಗಳ ಮೂಲಕ ಕಣ್ಗಾವಲು ಇಡಲಾಗುವುದು ಎಂದು ಅವರು ಹೇಳಿದರು.
ಡಾ. ವೈ.ಎ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ೧೪೬೬೦ ಪ್ರಕರಣಗಳಲ್ಲಿ ೩೮೯೪೭ ಎಕರೆ ಜಮೀನು ಒತ್ತುವರಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ೧೨೯೨ ಪ್ರಕರಣಗಳಲ್ಲಿ ೩೮೯೮ ಎಕರೆ ಜಮೀನು ಒತ್ತುವರಿಯಾಗಿದೆ ಎಂದು ಹೇಳಿದರು.
ಸರ್ಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ ೧೨೯೨ ಪ್ರಕರಣಗಳಲ್ಲಿ ೩೮೯೮ ಎಕರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ೩೭೬ ಪ್ರಕರಣಗಳಲ್ಲಿ ೩೨೪೯ ಎಕರೆ ಸರ್ಕಾರಿ ಜಮೀನಿನ ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡುವ ಸಂಬಂಧ ಕಾನೂನು ತಂಡವನ್ನು ರಚಿಸಲಾಗುವುದು. ಈ ಸಂಬಂಧ ಅಡ್ವೋಕೇಟ್ ಜನರಲ್ ಜತೆ ಚರ್ಚೆ ನಡೆಸಲಾಗಿದೆ. ಕೆಲವೆಡೆ ಬಲಿಷ್ಠರು ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ, ಕೆಲವು ಕಡೆ ಕಂದಾಯ ಇಲಾಖೆ ಅಧಿಕಾರಿಗಳೇ ಒತ್ತುವರಿಯಲ್ಲಿ ಶಾಮೀಲಾಗಿದ್ದಾರೆ. ಇಂತಹವರ ಕಪಿಮುಷ್ಠಿಯಿಂದ ಸರ್ಕಾರಿ ಜಮೀನನ್ನು ಮರಳಿ ವಾಪಸ್ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಒತ್ತುವರಿಯಾಗಿರುವ ಸರ್ಕಾರಿ ಜಮೀನನ್ನು ಉಪವಿಭಾಗಾಧಿಕಾರಿಗಳು ಮತ್ತು ವಿಶೇಷ ಜಿಲ್ಲಾಧಿಕಾರಿಗಳ ಮಟ್ಟದ ಅಧಿಕಾರಿಗಳಿಂದ ಒತ್ತುವರಿ ತೆರವು ಆದೇಶ ಹೊರಡಿಸಿ ಅದರ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಗ್ಯಾರಂಟಿ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿರುವ ೫ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿ ಮಾಡುವುದು ಗ್ಯಾರಂಟಿ. ಇದಕ್ಕಾಗಿ ಸರ್ಕಾರ ಹಣ ಹೊಂದಿಸಲಿದೆ. ಆದರೆ ಸರ್ಕಾರಿ ಜಮೀನು ಮಾರಿ ಹಣ ಹೊಂದಿಸುವ ಪರಿಸ್ಥಿತಿ ಎದುರಾಗಿಲ್ಲ ಎಂದು ಅವರು ಹೇಳಿದರು.
ಒಟ್ಟಾರೆ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅಧಿಕಾರಿಗಳೇ ಹೊಣೆ..
ಸರ್ಕಾರಿ ಭೂಮಿಯನ್ನು ಒತ್ತುವರಿ ತೆರವು ಮಾಡಿರುವುದನ್ನು ಮತ್ತು ಒತ್ತುವರಿಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಮತ್ತೆ ಒತ್ತುವರಿಯಾದರೆ ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿಧಾನ ಪರಿಷತ್ತಿನಲ್ಲಿಂದು ಹೇಳಿದ್ದಾರೆ.
ತೇಜಸ್ವಿನಿಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ರೀತಿ ಒತ್ತುವರಿ ತೆರವು ಆಗಿರುವುದನ್ನು ರಕ್ಷಣೆ ಮಾಡಲು ಅಧಿಕಾರಿಗಳಿಗೆ ಜವಾಬ್ದಾರಿ ನೀಡುವುದರಿಂದ ತೆರವುಗೊಳಿಸಿದ ಜಮೀನನ್ನು ರಕ್ಷಣೆ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.