ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯಿಂದ ಪ್ರಗತಿ ಪರಿಶೀಲನೆ:ಒಂದು ತಿಂಗಳೊಳಗಾಗಿ ದೇವಸ್ಥಾನಗಳ ಆಸ್ತಿ ವಹಿ ದಾಖಲೀಕರಣಕ್ಕೆ ಸೂಚನೆ

ಕಲಬುರಗಿ,ಜು.26: ಕಲಬುರಗಿ ಮತ್ತು ಬೀದರ ಜಿಲ್ಲೆಗಳಲ್ಲಿರುವ ‘ಎ’, ‘ಬಿ’ ಹಾಗೂ ಸಿ ವರ್ಗದ ದೇವಸ್ಥಾನಗಳ ಆಸ್ತಿಯನ್ನು ಒಂದು ತಿಂಗಳಲ್ಲಿ ಸರಿಯಾಗಿ ದಾಖಲು ಮಾಡಿಕೊಂಡು ಆಸ್ತಿ ವಹಿ ನಿರ್ವಹಣೆ ಮಾಡಬೇಕು ಎಂದು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಜಿ. ಭೋಪಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಕಲಬುರಗಿ ನಗರದ ಡಿ.ಸಿ ಕಚೇರಿ ಸಭಾಂಗಣದಲ್ಲಿ ಬೀದರ ಮತ್ತು ಕಲಬುರಗಿ ಜಿಲ್ಲೆಗಳ ಮುಜರಾಯಿ ಇಲಾಖೆಗೆ ಸೇರಿದ ಸ್ಥಿರ ಮತ್ತು ಚರಾಸ್ತಿಗಳ ಸಮಗ್ರ ಮಾಹಿತಿ ಪರಾಮರ್ಶೆ, ಒತ್ತುವರಿ, ಭೂಕಬಳಿಕೆ ಹಾಗೂ ನ್ಯಾಯಾಲಯದ ಪ್ರಕರಣಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ರಾಜ್ಯದಾದ್ಯಂತ ಸಮಿತಿ ಪ್ರವಾಸ ಮಾಡಿ ದೇವಸ್ಥಾನಗಳ ಅಸ್ತಿ ನಿರ್ವಹಣೆ ಸಂಬಂಧ ವಿಶೇಷ ಒತ್ತು ನೀಡಿ ಪ್ರಗತಿ ಪರಿಶೀಲನೆ ಮಾಡುತ್ತಿದ್ದೇವೆ. ಆದರೆ ಎಲ್ಲಿಯೂ ಸರಿಯಾಗಿ ಆಸ್ತಿ ನಿರ್ವಹಣೆ ವಹಿ ಇಟ್ಟುಕೊಂಡು ನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಮುಂದಿನ ಒಂದು ತಿಂಗಳಲ್ಲಿ ಮತ್ತೊಮ್ಮೆ ಸ್ಥಳ ಪರಿಶೀಲನೆ ಮಾಡಿ ಆಸ್ತಿ ದಾಖಲು ಮಾಡಿಕೊಂಡು ದೇವಸ್ಥಾನ ಆಸ್ತಿ ಸಂರಕ್ಷಿಸಬೇಕು. ದೇವಸ್ಥಾನ ಅತಿಕ್ರಮಣವಾಗಿದಲ್ಲಿ ಕೂಡಲೆ ಸರ್ವೇ ಮಾಡಿ ಅದನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಖಡಕ್ ಸೂಚನೆ ನೀಡಿದರು.
ಇಂದಿಲ್ಲ ಕರೆದ ಸಭೆಯಲ್ಲಿ ಕಲಬುರಗಿ ಮತ್ತು ಬೀದರ ಜಿಲ್ಲೆಗಳಲ್ಲಿನ ‘ಸಿ’ ವರ್ಗದ ದೇವಸ್ಥಾನದ ಬಗ್ಗೆ ತಹಶೀಲ್ದಾರರ ಉತ್ತರ ಸಮಾಧಾನ ತಂದಿಲ್ಲ. ಕೂಡಲೆ ತಹಶೀಲ್ದಾರರು, ಸಹಾಯಕ ಆಯುಕ್ತರು ಈ ಆಸ್ತಿಗಳ ಸಂರಕ್ಷಣೆ ಮತ್ತು ದೇವಸ್ಥಾನದ ಮೂಲಕ ಬರುವ ಆದಾಯ ಪೋಲಾಗದಂತೆ ನೋಡಿಕೊಳ್ಳಬೇಕು ಮತ್ತು ಪ್ರತಿ ತಿಂಗಳು ಇದರ ಪ್ರಗತಿ ಪರಿಶೀಲನೆ ನಡೆಸಬೇಕು ಎಂದರು.
ಸಮಿತಿ ಸದಸ್ಯರಾಗಿರುವ ವಿಧಾನಸಭಾ ಸದಸ್ಯ ಎ.ಟಿ.ರಾಮಸ್ವಾಮಿ ಮಾತನಾಡಿ, ನೆಲಗಳ್ಳರು, ಭೂಗಳ್ಳರು ಎಲ್ಲೆಡೆ ವ್ಯಾಪಿಸಿದ್ದಾರೆ. ಹೀಗಾಗಿ ದೇವಸ್ಥಾನಗಳ ಸಂರಕ್ಷಿಸುವ ಜವಾಬ್ದಾರಿ ತಹಶೀಲ್ದಾರರು, ಸಹಾಯಕ ಆಯುಕ್ತರು, ಡಿ.ಸಿ.ಗಳ ಮೇಲೆ ಹೆಚ್ಚಿದೆ. ಕೇವಲ ತೋರ್ಪಡಿಕೆಗೆ ಭಕ್ತಿ ಇದ್ದರೆ ಸಾಲದು, ನಿಜವಾದ ಭಕ್ತಿ ಇದ್ದರೆ ದೇವಸ್ಥಾನಗಳ ಸಂರಕ್ಷಣೆಗೆ ಮುಂದಾಗಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು ದೇವಸ್ಥಾನದಲ್ಲಿ ವಾಣಿಜ್ಯ ಅಂಗಡಿಗಳಿಗೆ ಕಳೆದ 20-30 ವರ್ಷಗಳ ಹಿಂದಿನ ಬಾಡಿಗೆ ದರವನ್ನು ಹಾಗೇ ಮುಂದುವರೆಸದೇ ಇಂದಿನ ಮಾರುಕಟ್ಟೆ ದರದಲ್ಲಿ ಪರಿಷ್ಕøತ ದರ ನಿಗದಿಪಡಿಸಿ ಎಂದರು.
ಸಮಿತಿಯ ಇನ್ನೋರ್ವ ಸದಸ್ಯರಾದ ಹುಮನಾಬಾದ ಶಾಸಕ ಬಸವರಾಜ ಪಾಟೀಲ ಹುಮನಾಬಾದ ಮಾತನಾಡಿ, ಇಂದಿನ ಸಭೆಯಲ್ಲಿ ‘ಸಿ’ ವರ್ಗದ ದೇವಸ್ಥಾನಗಳ ಕುರಿತಂತೆ ತಹಶೀಲ್ದಾರರು ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ‘ಎ’ ಮತ್ತು ‘ಬಿ’ ವರ್ಗದ 400 ದೇವಸ್ಥಾನಗಳಿದ್ದರೆ, ‘ಸಿ’ ವರ್ಗದ ದೇವಸ್ಥಾನಗಳ ಸಂಖ್ಯೆ 34 ಸಾವಿರ ಇವೆ. ಈ ದೇವಸ್ಥಾನಗಳ ಸಂರಕ್ಷಣೆ ಸಂಪೂರ್ಣ ಜವಾಬ್ದಾರಿ ತಹಶೀಲ್ದಾರರು, ಸಹಾಯಕ ಆಯುಕ್ತರದ್ದಾಗಿದೆ ಎಂದರು.
ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಮಾತನಾಡಿ ಜಿಲ್ಲೆಯಲ್ಲಿ ‘ಎ’ ಮತ್ತು ‘ಬಿ’ ವರ್ಗದ ತಲಾ 3 ಮತ್ತು ‘ಸಿ’ ವರ್ಗದ 1624 ಸೇರಿದಂತೆ ಮುಜರಾಯಿ ಇಲಾಖೆ ವ್ಯಾಪ್ತಿಗೆ 1630 ದೇವಸ್ಥಾನಗಳಿವೆ. 2.62 ಕೋಟಿ ರೂ. ವಿವಿಧ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿದೆ. ‘ಎ’ ಮತ್ತು ‘ಬಿ’ ವರ್ಗದ ಆಸ್ತಿ ನಿರ್ವಹಣೆ ಡಿ.ಸಿ. ಕಚೇರಿಯಿಂದ ಮಾಡಲಾಗುತ್ತಿದ್ದು, ‘ಸಿ’ ವರ್ಗದ ದೇವಸ್ಥಾನಗಳ ಜವಬ್ದಾರಿ ತಹಶೀಲ್ದಾರರಿಗೆ ನೀಡಿದೆ. ಮುಂದಿನ ಒಂದು ತಿಂಗಳಲ್ಲಿ ಜಿಲ್ಲೆಯ ಎಲ್ಲಾ ‘ಸಿ’ ವರ್ಗದ ದೇವಸ್ಥಾನಗಳ ಆಸ್ತಿ ನಿರ್ವಹಣೆಯನ್ನು ಸರಿಪಡಿಸಲಾಗುವುದು ಎಂದು ಸಮಿತಿ ಗಮನಕ್ಕೆ ತಂದರು.
ಡಿ.ಸಿ. ಯಶವಂತ ವಿ. ಗುರುಕರ್ ಮಾತು ಮುಂದುವರೆಸಿ, ಜಿಲ್ಲೆಯ ಅಫಜಲಪೂರ ತಾಲೂಕಿನ ಗಾಣಗಾಪೂರ ಶ್ರೀ ದತ್ತಾತ್ರೇಯ ದೇವಸ್ಥಾನ ಮತ್ತು ಕ್ಷೇತ್ರವನ್ನು ಗುಜರಾತಿನ ಸಾಬರಮತಿ ಮಾದರಿಯಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಜಿಲ್ಲಾ ಉಸ್ತುವಾರಿ ಡಾ.ಮುರುಗೇಶ ನಿರಾಣಿ ಅವರು ಸೂಚಿಸಿದ್ದು, ಆ ನಿಟ್ಟಿನಲ್ಲಿ ನಾವು ಸಾಗಿದ್ದೇವೆ. ಇತ್ತೀಚೆಗೆ ದೇವಸ್ಥಾನದಲ್ಲಿ ಕೆಲವರು ನಕಲಿ ವೆಬ್‍ಸೈಟ್ ಸೃಷ್ಠಿಸಿ ದೇವಸ್ಥಾನ ಆದಾಯ ಖೋತಾ ಮಾಡಿದ ಪ್ರಕರಣದಲ್ಲಿ 5 ಜನರ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ ಎಂದರು.
ದತ್ತಾತ್ರೇಯ ದೇವಸ್ಥಾನಕ್ಕೆ ಪ್ರತಿ ಮಾಸಿಕ ಹುಣ್ಣಿಮೆ ದಿನದಂದು ರಾಜ್ಯದ ವಿವಿಧ ಜಿಲ್ಲೆ ಮತ್ತು ಪಕ್ಕದ ಮಹಾರಾಷ್ಟ್ರ, ತೆಲಾಂಗಾಣಾ, ಆಂಧ್ರ ಪ್ರದೇಶದಿಂದ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಅಂದು ವಿಶೇಷ ದರ್ಶನಕ್ಕೆ 111 ರೂ. ಪಡೆಯುತ್ತಿದ್ದು, ಇದನ್ನು ಪರಿಷ್ಕøತಗೊಳಿಸಿದಲ್ಲಿ ಹೆಚ್ಚಿನ ಆದಾಯ ಪಡೆಯಬಹುದಾಗಿದೆ. ಪರಿಷ್ಕರಣೆ ಅಧಿಕಾರ ಸರ್ಕಾರಕ್ಕೆ ಇರುವುದರಿಂದ, ಇದನ್ನು ಡಿ.ಸಿ. ಹಂತದಲ್ಲಿಯೇ ನೀಡಿದಲ್ಲಿ ಅನುಕೂಲವಾಗಲಿದೆ ಎಂದು ಸಮಿತಿ ಗಮನಕ್ಕೆ ತಂದರು. ಇದಕ್ಕೆ ಸಮಿತಿ ಸಹಮತಿ ವ್ಯಕ್ತಪಡಿಸಿ ಡಿ.ಸಿ. ಅವರಿಗೆ ಅಧಿಕಾರ ನೀಡುವ ಸಂಬಂಧ ಸುತ್ತೋಲೆ ಹೊರಡಿಸಬೇಕೆಂದು ಸಭೆಯಲ್ಲಿದ್ದ ಕಂದಾಯ ಇಲಖೆಯ ಜಂಟಿ ಕಾರ್ಯದರ್ಶಿ ಕವಿತಾ ರಾಣಿ ಮತ್ತು ಮುಜರಾಯಿ ಇಲಾಖೆಯ ಉಪ ಆಯುಕ್ತ ಅಭಿಜಿನ್ ಅವರಿಗೆ ನಿರ್ದೇಶನ ನೀಡಿತು.
ಬೀದರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ ತಮ್ಮ ಜಿಲ್ಲೆಯಲ್ಲಿ ‘ಎ’ ವರ್ಗದ 7, ‘ಬಿ’ ವರ್ಗದ 4 ಹಾಗೂ ‘ಸಿ’ ವರ್ಗದ 520 ದೇವಸ್ಥಾನಗಳಿವೆ. ಎಲ್ಲಾ ದೇವಸ್ಥಾನಗಳು ಸೇರಿ 16.30 ಕೋಟಿ ರೂ. ಠೇವಣಿ ಇಟ್ಟಿದ್ದು, 9.56 ಕೋಟಿ ರೂ. ಉಳಿತಾಯ ಖಾತೆಯಲ್ಲಿದೆ. ಪ್ರಸ್ತುತ ದೇವಸ್ಥಾನದಲ್ಲಿ 1 ಕೋಟಿ ರೂ. ಮೊತ್ತಕ್ಕೂ ಹೆಚ್ಚಿನ ಕಾಮಗಾರಿಗೆ ಸರ್ಕಾರಕ್ಕೆ ಅನುಮತಿ ಪಡೆಯಬೇಕಾಗಿರುವುದರಿಂದ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ತೊಂದರೆಯಾಗುತ್ತಿದ್ದು, ಇತರೆ ಇಲಾಖೆಗಳ ಕಾಮಗಾರಿಗಳಂತೆ ಡಿ.ಸಿ. ಅವರಿಗೆ 2.50 ಕೋಟಿ ರೂ. ವರೆಗಿನ ಕಾಮಗಾರಿ ಕೈಗೊಳ್ಳಲು ಅಧಿಕಾರ ನೀಡಿದಲ್ಲಿ ಅನುಕೂಲವಾಗುತ್ತದೆ ಎಂದು ಸಮಿತಿ ಗಮನಕ್ಕೆ ತಂದರು. ಇದಕ್ಕೆ ಸಮಿತಿ ಸಹಮತಿ ವ್ಯಕ್ತಪಡಿಸಿತು.
ಕಲಬುರಗಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಮತ್ತು ಬೀದರ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರು ಜಿಲ್ಲೆಗಳ ದೇವಸ್ಥಾನಗಳ ಬಗ್ಗೆ ಸಂಪೂರ್ಣ ಮಾಹಿತಿ ಸಮಿತಿ ಮುಂದಿಟ್ಟರು.
ಸಭೆಯಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಕೆ.ಪಿ.ಎಲ್.ಸಿ. ವ್ಯವಸ್ಥಾಪಕ ನಿರ್ದೇಶಕ ಪಿ. ವಸಂತಕುಮಾರ್ ಸೇರಿದಂತೆ ಕಲಬುರಗಿ ಮತ್ತು ಬೀದರ ಜಿಲ್ಲೆಗಳ ಸಹಾಯಕ ಆಯುಕ್ತರು, ತಹಶೀಲ್ದಾರರು, ದೇವಸ್ಥಾನಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಇದ್ದರು.