ಸರ್ಕಾರಿ ಜಮೀನುಗಳನ್ನು ಗುರುತಿಸಿ ಕಾಯ್ದಿರಿಸುವಂತೆ ಜಿಲ್ಲಾಧಿಕಾರಿ ಡಾ. ರವಿ ನಿರ್ದೇಶನ

ಚಾಮರಾಜನಗರ, ನ.21- ಜಿಲ್ಲೆಯಲ್ಲಿರುವ ಸರ್ಕಾರಿ ಜಮೀನುಗಳನ್ನು ಗುರುತಿಸಿ ಸರ್ಕಾರದ ಇಲಾಖೆಗಳು ಅನುಷ್ಠಾನಗೊಳಿಸುವ ಯೋಜನೆ ಸೌಲಭ್ಯಗಳಿಗಾಗಿ ಕಾಯ್ದಿರಿಸಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಅಧಿಕಾÀರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಯಾವುದೇ ಭಾಗದಲ್ಲಾಗಲಿ ಸರ್ಕಾರಿ ಖರಾಬು ಅಥವಾ ಗೋಮಾಳ ಇರಲಿ ಯಾವುದೇ ಸರ್ಕಾರಿ ಜಮೀನುಗಳನ್ನು ಗುರುತಿಸಿ ಸರ್ಕಾರದ ಸಂಸ್ಥೆಗಳಿಗೆ ಕಾಯ್ದಿರಿಸಬೇಕು, ವಸತಿ ಯೋಜನೆ, ಸ್ಮಶಾನ, ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ಅನುಷ್ಠಾನ ದಂತಹ ಪ್ರಮುಖ ಯೋಜನೆಗಳಿಗೆ ಸರ್ಕಾರಿ ಭೂಮಿಯನ್ನು ಬಳಕೆ ಮಾಡಿಕೊಳ್ಳುವ ಸಂಬಂಧ ಭೂ ಬ್ಯಾಂಕ್ ಕ್ರೋಢಿಕರಣಕ್ಕೆ ಅಧಿಕಾರಿಗಳು ಕಾಯೋನ್ಮುಖರಾಗಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ವಸತಿ ಯೋಜನೆಗಾಗಿ ಕನಿಷ್ಠ 3 ರಿಂದ 5 ಎಕರೆ ಜಮೀನುಗಳನ್ನು ಗುರುತಿಸಬೇಕು. ತಹಶೀಲ್ದಾರರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ವಸತಿ ಯೋಜನೆಯ ನೋಡೆಲ್ ಅಧಿಕಾರಿಗಳು ಒಟ್ಟಾಗಿ ಜಮೀನುಗಳನ್ನು ವಸತಿ ನಿರ್ಮಾಣಕ್ಕಾಗಿ ಗುರುತಿಸಲು ಮುಂದಾಗಬೇಕು ಎಂದರು.
ಜಿಲ್ಲೆಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿರುವ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಲು ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ತಾಲ್ಲೂಕುವಾರು ಬಾಕಿಯಿರುವ ಸರ್ಕಾರಿ ಜಮೀನುಗಳ ಒತ್ತುವರಿ ಪ್ರಕರಣಗಳ ಬಗ್ಗೆ ತುರ್ತಾಗಿ ಗಮನಹರಿಸಿ ತೆರವುಗೊಳಿಸಲು ಕಾರ್ಯೋನ್ಮುಖರಾಗಬೇಕೆಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಮಾಲಿಕತ್ವ ಹೊಂದಿರುವ ಇಲಾಖೆಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಮೂರನೇ ಶನಿವಾರದಂದು ನಿರ್ವಹಿಸಲು ಈಗಾಗಲೇ ಸೂಚಿಸಲಾಗಿದೆ. ಒತ್ತುವರಿ ತೆರವು ಕಾರ್ಯ ಮೊದಲು ಇಲಾಖೆಗಳ ಸಭೆ ನಡೆಸಿ ಪೂರ್ವ ಮಾಹಿತಿಯನ್ನು ನೀಡಬೇಕು. ಈಗಾಗಲೇ ನೀಡಲಾಗಿರುವ ನಿರ್ದೇಶನಗಳನ್ನು ಪಾಲನೆ ಮಾಡಬೇಕು. ಪೋಡಿ ಪ್ರಕರಣಗಳ ವಿಲೇವಾರಿ ಯಲ್ಲಿ ವಿಳಂಬ ಧೋರಣೆ ಅನುಸರಿಸಬಾರದು. ಹದ್ದಬಸ್ತು, ಇ-ಸ್ವತ್ತು, ತತ್ಕಾಲ್ ಪೋಡಿ, 11-ಇ ಇತರೆ ಬಾಕಿ ಪ್ರಕರಣಗಳನ್ನು ಅತೀ ಶೀಘ್ರವಾಗಿ ವಿಲೇವಾರಿ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ಪಿಂಚಣಿ ಮಂಜೂರಾತಿ ಪ್ರಕ್ರಿಯೆಯನ್ನು ತುರ್ತಾಗಿ ಕೈಗೊಳ್ಳಬೇಕು. ಸೇವಾ ಮಿತ್ರ ಯೋಜನೆಯಡಿ ಫಲಾನುಭವಿಯ ಮನೆ ಬಾಗಿಲಿಗೆ ಸೌಲಭ್ಯ ಮಂಜೂರಾತಿ ತಲುಪಬೇಕು, ಆಯಾ ಹೋಬಳಿಯಲ್ಲೇ ಅದಾಲತ್ ನಡೆಸಿ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಪಿಂಚಣಿ ಮಂಜೂರಾತಿ ಮಾಡಬೇಕು ಎಂದರು.
ಈಗಾಗಲೇ ಬೆಂಬಲ ಯೋಜನೆಯಡಿ ಭತ್ತ ಖರೀದಿಸುವ ಸಲುವಾಗಿ ಖರೀದಿ ಕೇಂದ್ರಗಳನ್ನು ಆಯಾ ಎಪಿಎಂಸಿಗಳಲ್ಲಿ ತೆರೆಯಲು ಸೂಚಿಸಲಾಗಿದೆ. ಈ ಬಗ್ಗೆ ವ್ಯಾಪಕವಾಗಿ ರೈತರಿಗೆ ಮಾಹಿತಿ ಒದಗಿಸಬೇಕು. ರೈತ ಸಂಪರ್ಕ ಕೇಂದ್ರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮಾಹಿತಿ ನೀಡಬೇಕು. ಕರಪತ್ರ ಇನ್ನಿತರ ವಿಧಾನಗಳ ಮೂಲಕ ಸರ್ಕಾರದ ಬೆಂಬಲ ಬೆಲೆ ಯೋಜನೆ ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಪಡೆಯಲು ರೈತರಿಗೆ ಅನುಕೂಲ ಕಲ್ಪಿಸಬೇಕು. ಫಸಲ್ ಬಿಮ ಯೋಜನೆ ಪ್ರಯೋಜನವೂ ತಲುಪಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಜಂಟಿ ಕೃಷಿ ನಿರ್ದೇಶಕರಾದ ಚಂದ್ರಕಲಾ, ತಹಶೀಲ್ದಾರರಾದ ಕೆ. ಕುನಾಲ್, ಚಿದಾನಂದ ಗುರುಸ್ವಾಮಿ, ಸುದರ್ಶನ್, ನಂಜುಂಡಯ್ಯ, ತೋಟಗಾರಿಕೆ ಇಲಾಕೆಯ ಉಪ ನಿರ್ದೇಶಕರಾದ ಶಿವಪ್ರಸಾದ್, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕರಾದ ವೀರಭದ್ರಯ್ಯ, ಭೂ ದಾಖಲೆಗಳ ಉಪನಿರ್ದೇಶಕ ವಿ. ಅಜ್ಜಪ್ಪ ಸೇರಿದಂತೆ ನವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.