ಸರ್ಕಾರಿ ಗೌರವದೊಂದಿಗೆ ಡಿವೈಎಸ್‌ಪಿ ಲಕ್ಷ್ಮೀ ಅಂತ್ಯ ಕ್ರಿಯೆ

ಮಾಲೂರು, ಡಿ. ೧೮- ಬುಧವಾರ ರಾತ್ರಿ ಬೆಂಗಳೂರಿನ ಸ್ನೇಹಿತರ ಮನೆಯಲ್ಲಿ ಸಿಐಡಿ ಡಿವೈಎಸ್‌ಪಿ ಲಕ್ಷ್ಮಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಮೃತ ಲಕ್ಷೀ ಪಾರ್ತಿವ ಶರೀರವನ್ನು ಮಾಸ್ತಿ ಹೋಬಳಿಯ ಅವರ ತಂದೆಯವರ ಸ್ವಗೃಹ ತುರುವಾಲಹಟ್ಟಿ ಗ್ರಾಮದ ಬಳಿ ಗುರುವಾರ ಸಂಜೆ ಪೊಲೀಸ್ ಇಲಾಖೆಯ ಸಕಲ ಸರಕಾರಿ ಗೌರವಗಳೊಂದಿಗೆ ಗ್ರಾಮದ ರುದ್ರಭೂಮಿಯಲ್ಲಿ ಸಂಪ್ರದಾಯದಂತೆ ಅಂತ್ಯ ಸಂಸ್ಕಾರವನ್ನು ನಡೆಸಲಾಯಿತು.
ತಾಲೂಕಿನ ಮಾಸ್ತಿ ಹೋಬಳಿಯ ತುರುವಾಲಹಟ್ಟಿ ಗ್ರಾಮದ ವೆಂಕಟೇಶಪ್ಪ ಅವರ ಮಗಳು ಲಕ್ಷ್ಮೀ ೨೦೧೪ರ ಯುಪಿಎಸ್‌ಸಿ ಬ್ಯಾಚ್‌ನವರರಾಗಿದ್ದು, ಬೆಂಗಳೂರಿನಲ್ಲಿ ಹುಟ್ಟು ಬೆಳೆದು ಮಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದಾರೆ. ತಂದೆಯವರ ಗ್ರಾಮಕ್ಕೆ ಆಗಾಗ ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸಿಐಡಿ ಯಲ್ಲಿ ಡಿವೈಎಸ್‌ಪಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಇವರು ಬುಧವಾರ ರಾತ್ರಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ವಿನಾಯಕ ಲೇಔಟ್‌ನ ಸ್ನೇಹಿತರ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಪ್ರಾತೀವ ಶರೀರವನ್ನು ಅವರ ಪೋಷಕರ ಅಭಿಪ್ರಾಯದಂತೆ ಅಂಬ್ಯುಲೆನ್ಸ್ ಮೂಲಕ ತುರುವಾಲಹಟ್ಟಿ ಗ್ರಾಮಕ್ಕೆ ತಂದು ಅವರ ಸಂಪ್ರದಾಯ ಹಾಗೂ ಪೋಲಿಸ್ ಇಲಾಖೆಯ ಸಕಲ ಸರಕಾರಿ ಗೌರವಗಳೊಂದಿಗೆ ಗ್ರಾಮದ ಬಳಿಯ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸಿಪಿಐ ಮಾರ್ಕೋಂಡಯ್ಯ, ಮಾಸ್ತಿ ಪಿಎಸ್‌ಐ ಪ್ರದೀಫ್ ಹಾಗೂ ಪೊಲೀಸ್ ಸಿಬ್ಬಂದಿ, ಮೃತ ಲಕ್ಷೀ ಅವರ ಸಂಬಂಧಿಕರು ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದರು. ಅಂತಿಮ ದರ್ಶನ ಪಡೆಯಲು ಸುತ್ತ ಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.