ಸರ್ಕಾರಿ ಕೆಲಸದ ಆಸೆಗೆ ದೇಹ ಹಂಚಿಕೊಂಡೆ; ರಾಸಲೀಲೆ ಸಿಡಿ ಯುವತಿ ಅಳಲು

ಬೆಂಗಳೂರು,ಮಾ.26-ರಾಸಲೀಲೆ ಸಿಡಿ ಪ್ರಕರಣ ಸಂಬಂಧ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಸಂತ್ರಸ್ತ ಯುವತಿ ವಕೀಲ ಕೆ.ಎನ್. ಜಗದೀಶ್ ಕುಮಾರ್ ಅವರ ಮೂಲಕ ದೂರು ಸಲ್ಲಿಸಿದ್ದಾರೆ.
ಯುವತಿಯು ತಮ್ಮ ಕೈಯಿಂದ ಬರೆದಿರುವ ದೂರಿನ ಪ್ರತಿಯನ್ನು ನಮಗೆ ತಲುಪಿಸಿದ್ದು ಅದನ್ನೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ನೀಡಿ, ಮುಂದಿನ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದೇನೆ’ ಎಂದು ವಕೀಲ‌ ಜಗದೀಶ್‌ ಕುಮಾರ್‌ ಅವರು ತಿಳಿಸಿದ್ದಾರೆ.
ಸಿಡಿಯುವತಿಗೆ ಹಾಗೂ ಅವರ ಕುಟುಂಬದವರಿಗೆ ಜೀವ ಬೆದರಿಕೆ ಇದೆ. ಅವರಿಗೆ ಸೂಕ್ತ ಭದ್ರತೆ ನೀಡಬೇಕು. ನಂತರವೇ ಯುವತಿಯು ಪೊಲೀಸ್ ಆಯುಕ್ತರ ಮುಂದೆ ಹಾಜರಾಗಿ‌ ಹೇಳಿಕೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು ಹೇಳಿದ್ದಾರೆ.
ದೂರಿನ ವಿವರ:
ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ನನಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನೊಂದಿಗೆ ಲೈಂಗಿಕ ಸಂಪರ್ಕ ಮಾಡಿದ್ದಾರೆ. ವಿಡಿಯೊ ಕರೆ ಮೂಲಕ ನಗ್ನವಾಗಿ, ಅಶ್ಲೀಲವಾಗಿ ಮಾತನಾಡಲು ಪುಸಲಾಯಿಸಿ ಕೆಲಸ ಕೊಡಿಸದೆ ವಂಚಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರು ನೀಡುತ್ತಿದ್ದಾನೆ ಎಂದು ಯುವತಿ ಹೇಳಿದ್ದಾರೆ.
‘ನಾನು ಬೆಂಗಳೂರಿಲ್ಲಿ ಉದ್ಯೋಗ ಹುಡುಕಿಕೊಂಡು ಬಂದು ನೆಲೆಸಿದ್ದು, ಕಿರುಚಿತ್ರ ಮಾಡುವ ಸಲುವಾಗಿ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಅವರನ್ನು ಒಮ್ಮೆ ಭೇಟಿ ಮಾಡಿದ್ದೆ. ನಂತರ ಅವರು ನನ್ನ ಮೊಬೈಲ್‌ ನಂಬರ್ ಪಡೆದು ಕರೆ ಮಾಡುವುದಾಗಿ ತಿಳಿಸಿದರು. ನಂತರ ಅವರು ಕರೆ ಮಾಡಿ ನನ್ನ ಬಗ್ಗೆ ಮತ್ತು ಕುಟುಂಬದ ಬಗ್ಗೆ ವಿಚಾರಿಸಿ ಸಲುಗೆಯಿಂದ ಮಾತನಾಡಲು ಆರಂಭಿಸಿದರು.
ಕಾಳಜಿಯಿಂದ ಖುಷಿ:
ಸಚಿವರು ನನ್ನನ್ನು ಅಷ್ಟು ಕಾಳಜಿಯಿಂದ ಮಾತನಾಡಿಸಿದ್ದು, ನನಗೆ ತುಂಬಾ ಖುಷಿಯಾಯಿತು. ಹಾಗಾಗಿ ಅವರನ್ನು ಗೌರವದಿಂದ ಮಾತನಾಡಿಸಿದೆ. ಅಗಾಗ ನನಗೆ ಕರೆ ಮಾಡಿ ಮಾತನಾಡಲು ಆರಂಭಿಸಿದರು. ನನಗೆ ತಮ್ಮ ಪ್ರಭಾವ ಬಳಸಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿದರು. ಬದಲಾಗಿ ನೀನು ನನ್ನ ಜೊತೆಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಕೇಳಿದರು.
ಅವರನ್ನು ಟಿವಿಗಳಲ್ಲಿ ನೋಡಿದ್ದು, ಮಂತ್ರಿ ಈ ರೀತಿ ಹೇಳಿದ ಮೇಲೆ ಕೆಲಸ ಕೊಟ್ಟೇ ಕೊಡಿಸುತ್ತಾರೆ ಎಂದು ನಂಬಿದೆ. ನನ್ನ ಬಳಿ ಹಣವಿಲ್ಲದಿರುವುದನ್ನು ಮುಂಚೆಯೇ ತಿಳಿದುಕೊಂಡಿದ್ದ ಅವರು ಹಣದ ಬದಲು ಅವರ ಜೊತೆಗೆ ಸಹಕರಿಸಿ ಖುಷಿ ನೀಡಬೇಕು ಎಂದು ಕೇಳಿದ್ದರಿಂದ ನಂಬಿ ಅವರು ಕೇಳಿದಂತೆ ನಡೆದುಕೊಂಡು ಬಂದಿದ್ದೇನೆ.
ಲೈಂಗಿಕವಾಗಿ ಚರ್ಚೆ:
ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಉಳಿದುಕೊಂಡಿದ್ದೇನೆ ಎಂದು ವಿಡಿಯೊ ಕರೆ ಮಾಡಿ ನನ್ನೊಂದಿಗೆ ಲೈಂಗಿಕ ವಿಚಾರಗಳನ್ನು ಮಾತನಾಡಿದ್ದರು. ನಾನು ಅವರು ಹೇಳಿದಂತೆಯೇ ಮಾಡಿದ್ದೇನೆ.
ನಂತರ ಬೆಂಗಳೂರಿಗೆ ಬಂದು ನನ್ನ ನಿವಾಸಕ್ಕೆ ಬಾ ನಿನ್ನ ಕೆಲಸ ವಿಚಾರವಾಗಿ ಮಾತನಾಡಬೇಕು ಎಂದರು.
ನಾನು ಅವರು ಹೇಳಿದ ಅಪಾರ್ಟ್‌ಮೆಂಟ್‌ಗೆ ಎರಡು ಬಾರಿ ಹೋಗಿದ್ದೆ. ಅವರು ನನ್ನೊಂದಿಗೆ ಅಶ್ಲೀಲವಾಗಿ ನಡೆದುಕೊಂಡರು. ನಾನು ಎದುರು ಮಾತನಾಡಲು ಹೆದರಿ ಅವರು ಕೇಳಿದಂತೆ ಮಾಡಿರುತ್ತೇನೆ. ನಂತರ ಸರ್ಕಾರಿ ನೌಕರಿ ಬಗ್ಗೆ ಕೇಳಿದಾಗ ಸ್ವಲ್ಪ ಹಣ ಬೇಕಾದರೆ ಕೇಳು ಕೆಲಸದ ಬಗ್ಗೆ ಆಮೇಲೆ ನೋಡೋಣ ಎಂದು ಅಂತರ ಕಾಯ್ದುಕೊಂಡಿದ್ದರು.
ಜೀವ ಬೆದರಿಕೆ:
ಇದಾದ ಕೆಲ ದಿನಗಳ ಬಳಿಕ ವಿಡಿಯೊಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ನಾನು ರಮೇಶ ಜಾರಕಿಹೊಳಿ ವಿರುದ್ಧ ದೂರು ನೀಡದಂತೆ ಈ ರೀತಿ ಕುತಂತ್ರವನ್ನು ಮಾಡಿದ್ದಾರೆ. ಹಣವಂತರು, ಪ್ರಭಾವಿಗಳಾದ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಂದ ನನಗೂ ಮತ್ತು ಕುಟುಂಬಸ್ಥರಿಗೂ ಜೀವ ಬೆದರಿಕೆ ಇದೆ.
ನಾನು ದೂರು ನೀಡದಂತೆ ತಡೆಯಲು ಮತ್ತು ಅವರ ಕೈಗೆ ಸಿಕ್ಕರೆ ಕೊಂದು ಬಿಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ದಯಮಾಡಿ ತಾವು ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಭದ್ರತೆ ನೀಡಿ. ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಕೆಲಸ ಕೊಡಿಸದೆ ಮೋಸ ಮಾಡಿರುವ ರಮೇಶ ಜಾರಕಿಹೊಳಿ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇನೆ.
ವಕೀಲರಿಂದ ದೂರು:
ನಾನು ನೇರವಾಗಿ ಯಾವ ಪೊಲೀಸ್‌ ಠಾಣೆಗೂ ಬಂದು ದೂರು ನೀಡದಂತೆ ಪೊಲೀಸ್‌ ಇಲಾಖೆಯನ್ನು ಬಳಸಿಕೊಳ್ಳುತ್ತಿದ್ದಾರೆ. ನನ್ನ ಪರವಾಗಿ ಯಾರೂ ಮಾತನಾಡದಂತೆ ತೇಜೋವಧೆ ಮಾಡುತ್ತಿದ್ದಾರೆ. ನನಗೆ ಸಹಾಯ ಮಾಡಿದವರಿಗೆ ಮತ್ತು ಅವರ ಕುಟುಂಬಸ್ಥರಿಗೆ ಹಿಂಸೆ ಕೋಡುತ್ತಿರುವುದರಿಂದ ಬಹಳ ನೋವಾಗಿದೆ.
ನನಗೆ ಭದ್ರತೆ ಇಲ್ಲದೆ ಕಾರಣ ಕೈಯಲ್ಲಿ ಬರೆದು ಈ ದೂರನ್ನು ನನಗೆ ಪರಿಚಿತ ವಕೀಲರಾದ ಜಗದೀಶ್‌ ಅವರ ಮೂಲಕ ಕಳುಸುತ್ತಿದ್ದೇನೆ. ರಮೇಶ ಜಾರಕಿಹೊಳಿ ಮತ್ತು ಅವರ ಕಡೆಯವರಿಂದ ನಮಗೆ ಯಾವುದೇ ಅಪಾಯವಾಗದಂತೆ ರಕ್ಷಣೆ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.