ದೇವದುರ್ಗ,ಜು.೦೮-
ರಾಜ್ಯದಲ್ಲಿ ಖಾಸಗಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಹಾವಳಿಯಿಂದ ಕನ್ನಡ ಶಾಲೆಗಳಿಗೆ ಕುತ್ತುಬಂದಿದ್ದು, ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಲು ಸರ್ಕಾರ ಅಭಿಯಾನ ಕೈಗೊಂಡು ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿ ಶಿಕ್ಷಣ ಸಚಿವರಿಗೆ ಬರೆದ ಮನವಿ ಪತ್ರವನ್ನು ಬಿಇಒ ಎಚ್. ಸುಖದೇವ್‌ಗೆ ಕನ್ನಡ ಸಾಹಿತ್ಯ ಪರಿಷತ್ ಬುಧವಾರ ಸಲ್ಲಿಸಿತು.
ರಾಜ್ಯದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಇಂಗ್ಲಿಷ್ ಮಾಧ್ಯಮ ಹಾವಳಿಗಳಿಂದ ಕನ್ನಡ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಇದು ದುರದೃಷ್ಟರ ಸಂಗತಿ. ತಾಲೂಕಿನ ಗ್ರಾಮೀಣ ಪ್ರದೇಶದ ಸರ್ಕಾರಿ ಕನ್ನಡ ಶಾಲೆಗಳು ಬಡಮಕ್ಕಳಿಗೆ ವರದಾನವಾಗಿವೆ. ಶಾಲೆಗಳು ಮುಚ್ಚದಂತೆ ಸರ್ಕಾರ ಎಚ್ಚರ ವಹಿಸಬೇಕು. ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಡಿವಾಣ ಹಾಕಬೇಕು.
ಸರ್ಕಾರಿ ಕನ್ನಡ ಶಾಲೆಗಳಿಗೆ ಅಗತ್ಯ ಸೌಲಭ್ಯಗಳಾದ ಶಿಕ್ಷಕರ ನೇಮಕಾತಿ, ಕ್ರೀಡಾ ಸಾಮಗ್ರಿಗಳ ವಿತರಣೆ, ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮ ಆಯೋಜನೆ, ಕುಡಿವ ನೀರಿನ ವ್ಯವಸ್ಥೆ, ಶೌಚಗೃಹ ವ್ಯವಸ್ಥೆ ಕಲ್ಪಿಸಬೇಕು. ತರಗತಿ ಆರಂಭವಾದ ತಕ್ಷಣವೇ ಬಟ್ಟೆ, ಪಠ್ಯ ಪುಸ್ತಕಗಳ ವ್ಯವಸ್ಥೆ ಹಾಗೂ ಗ್ರಾಮೀಣ ಭಾಗದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿ ಮಕ್ಕಳ ಶೈಕ್ಷಣಿಕ ವಿಕಾಸನಕ್ಕೆ ಪೂರಕ ವಾತಾವರಣ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್, ಎಂಆರ್‌ಎಚ್‌ಎಸ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರ್, ನಾಗಪ್ಪ ಗಬ್ಬೂರು, ವಿದ್ಯಾರ್ಥಿಗಳಾದ ಮಂಜುನಾಥ್, ಯೂಸೂಫ್, ರಮೇಶ್ ಕುಮಾರ್, ಮಲ್ಲಿಕಾರ್ಜುನ್, ಸೌಂದರ್ಯ ಇತರರಿದ್ದರು.