ಸರ್ಕಾರಿ ಕಛೇರಿಗಳಲ್ಲಿ ತಂಬಾಕು ಮುಕ್ತಕ್ಕೆ ಕ್ರಮ ವಹಿಸಿ : ಜಿಲ್ಲಾಧಿಕಾರಿ

ಗದಗ,ಮಾ31 : ಜಿಲ್ಲೆಯಲ್ಲಿನ ಎಲ್ಲ ಕಚೇರಿಗಳು ತಂಬಾಕು ಮುಕ್ತ ಕಚೇರಿ ಗಳನ್ನಾಗಿಸಲು ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಕಚೇರಿಯಲ್ಲಿ ತಂಬಾಕು ನಿಷೇಧದ ಕುರಿತು ಫಲಕ ಅಳವಡಿಸಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.

ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ತಂಬಾಕು ನಿಷೇಧ ಕಾರ್ಯಕ್ರಮದಡಿ ತಂಬಾಕು ನಿಯಂತ್ರಣ ಹಾಗೂ ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಟಾನದ ಕುರಿತು ತಂಬಾಕು ನಿಷೇಧ ಕೋಶದ ಜಿಲ್ಲಾಮಟ್ಟದ ಸಮನ್ವಯ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಾ ಮಟ್ಟದಲ್ಲಿಯೂ ಸಹ ತಂಬಾಕು ನಿಯಂತ್ರಣ ದಳಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಶಾಲಾ ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ತಂಬಾಕು ನಿಷೇಧದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಮ್ಮಿಕೊಳ್ಳಬೇಕೆಂದು ಸೂಚಿಸಿದರು. ತಾಲೂಕು ಮಟ್ಟದಲ್ಲಿಯೂ ತಹಶೀಲ್ದಾರರು ಈ ಕುರಿತು ಸಭೆಗಳನ್ನು ಏರ್ಪಡಿಸಿ ತಂಬಾಕು ಮುಕ್ತ ಕಚೇರಿಗಳನ್ನಾಗಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದರು. ಎಲ್ಲಾ ಶಿಕ್ಷಣ ಸಂಸ್ಥೆಗಳ ಸುತ್ತ 100 ಗಜದ ವರೆಗೆ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ತಾಲೂಕಾ ತನಿಖಾದಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕುರಿತು ಕಠಿಣ ಕ್ರಮ ಕೈಕೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದರು.

ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಜಗದೀಶ ನುಚ್ಚಿನ ಮಾತನಾಡಿ, ಜಿಲ್ಲೆಯಲ್ಲಿ ಪಸಕ್ತ ವರ್ಷ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ ಶಾಲಾ ಕಾಲೇಜಿಗಳಲ್ಲಿ ತಂಬಾಕು ವ್ಯಸನದಿಂದಾಗುವ ದುಷ್ಪರಿಣಾಮ ಹಾಗೂ ಕೋಟ್ಪಾ ಕಾಯ್ದೆ ಕುರಿತು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆರೋಗ್ಯ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲಾ ಕಾಲೇಜುಗಳಲ್ಲಿ ತಂಬಾಕು ನಿಯಂತ್ರಣ ಸಮಿತಿ ರಚಿಸಲಾಗಿದೆ. ಜಿಲ್ಲೆಯಾದ್ಯಂತ 26 ಕೋಟ್ಪಾ ದಾಳಿ ಹಮ್ಮಿಕೊಳ್ಳುವದರ ಮೂಲಕ ವ್ಯಾಪಾರಸ್ಥರು, ತಂಬಾಕು ಬಳಕೆದಾರರಿಗೆ ಹಾಗೂ ಸಾರ್ವಜನಿಕರಲ್ಲಿ ಕೋಟ್ಪಾ ಕಾಯ್ದೆ ಕುರಿತು ಜಾಗೃತಿ ಮೂಡಿಸಲಾಗಿದೆ ಕೋಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಂಡು ಈ ವರ್ಷ 321 ಪ್ರಕರಣಗಳನ್ನು ದಾಖಲಿಸಿ ರೂ.48950/- ದಂಡ ಸಂಗ್ರಹಿಸಲಾಗಿದೆ. 5 ತರಬೇತಿ ಕಾರ್ಯಗಾರ ಹಾಗೂ ಜಿಲ್ಲೆಯ ಫ್ರೌಢ ಶಾಲಾ ಮುಖ್ಯೋಪಾಧ್ಯಾಯರುಗಳಿಗೆ ಜೂಮ್ ???ಫ್ ಮೂಲಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರದ ಮೂಲಕ ಈ ವರ್ಷ ಒಟ್ಟು 1045 ಅರ್ಥಿವ್ಯಸನಿಗಳಿಗೆ ಆಪ್ತ ಸಮಾಲೋಚನೆ ಮಾಡಿ 276 ವ್ಯಸನಿಗಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ. ಎಲ್ಲಾ ತಾಲೂಕಾ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ದಂತ ಆರೋಗ್ಯ ಕಾರ್ಯಕ್ರಮ ಕಾರ್ಯಕ್ರಮದ ಶಿಬಿರ ಹಮ್ಮಿಕೊಂಡು ತಂಬಾಕು ವ್ಯಸನಿಗಳಿಗೆ ಆಪ್ತಸಮಾಲೋಚನೆ ಮಾಡಿ ಚಿಕಿತ್ಸೆ ನೀಡಲಾಗಿದೆ. ಅದೆ ರೀತಿ ಸಮುದಾಯ ಮಟ್ಟದಲ್ಲಿ ಕೇಂದ್ರಕೃತ ಗುಂಪು ಚರ್ಚೆಯ ಮೂಲಕ ಒಟ್ಟು 48 ಎಫ್.ಜಿ.ಡಿ. ಕಾರ್ಯಕ್ರಮ ಮಾಡಲಾಗಿದೆ. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಕುರಿತು ಜಿಲ್ಲಾಡಳಿತದ ಎನ್ ಐಸಿ ವೆಬ್ ಸೈಟಿನಲ್ಲಿ ಅಪ್‍ಲೋಡ್ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ .ಸಿ.ಬಸರೀಗಿಡದ ಸರ್ವರನ್ನು ಸ್ವಾಗತಿಸಿದರು. ಸಭೆಯಲ್ಲಿ ಆರ್.ಸಿ.ಎಚ್. ಅಧಿಕಾರಿ ಡಾ.ಬಿ.ಎಂ.ಗೊಜನೂರ, ಡಾ. ಅರುಂಧತಿ ಕುಲಕರ್ಣಿ, ತಾಲೂಕಾ ವೈದ್ಯಾಧಿಕಾರಿ ಡಾ.ಎಸ್.ಎಸ್. ನೀಲಗುಂದ ಜಿಲ್ಲಾ ತಂಭಾಕು ನಿಷೇಧ ಕೋಶದ ಜಿಲ್ಲಾ ಸಲಹೆಗಾರ ಗೋಪಾಲ ಸುರಪುರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರುಗಳು ಹಾಜರಿದ್ದರು.