ಸರ್ಕಾರಿ ಕಚೇರಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಡಿ.ಸಿ. ಸೂಚನೆ

ಕಲಬುರಗಿ:ಮೇ.14: ಸರ್ಕಾರಿ ಕಚೇರಿಗೆ ದೈನಂದಿನ ಕೆಲಸಕ್ಕೆ ಬರುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ವಿಶೇಷಚೇತನರಿಗೆ ಅನುಕೂಲವಾಗುವಂತೆ ರ್ಯಾಂಪ್ ವ್ಯವಸ್ಥೆ ಸೇರಿದಂತೆ ಅವಕಾಶವಿದಲ್ಲಿ ಆಸನದ ವ್ಯವಸ್ಥೆ ಸಹ ಕಲ್ಪಿಸುವ ಮೂಲಕ ಜನಸ್ನೇಹಿ ಆಡಳಿತಕ್ಕೆ ಒತ್ತು ನೀಡಬೇಕೆಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸರ್ಕಾರಿ ಕಚೇರಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುತ್ತಿಲ್ಲವೆಂದು ಮುಖ್ಯಮಂತ್ರಿಗಳ ಕಚೇರಿಗೆ ಸಾರ್ವಜನಿಕರಿಂದ ದೂರು ಸಲ್ಲಿಕೆಯಾಗುತ್ತಿದ್ದು, ಜಿಲ್ಲೆಯಲ್ಲಿ ಇದಕ್ಕೆ ಆಸ್ಪದ ನೀಡದಂತೆ ಜಿಲ್ಲಾ, ತಾಲೂಕ ಹಾಗೂ ಗ್ರಾಮ ಪಂಚಾಯತಿ ಹಂತದ ಎಲ್ಲಾ ಸರ್ಕಾರಿ, ಅರೇ ಸರ್ಕಾರಿ ಕಚೇರಿಗಳಲ್ಲಿ ಕಚೇರಿ ಆವರಣ ಸ್ವಚ್ಛತೆಯೊಂದಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಎಲ್ಲಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಡಿ.ಸಿ. ಅವರು ನಿರ್ದೇಶನ ನೀಡಿದ್ದಾರೆ.