ಸರ್ಕಾರಿ ಕಚೇರಿಗಳು ಖಾಲಿ ಖಾಲಿ

ಕನಕಪುರ, ಮಾ.೩- ರಾಜ್ಯ ಸರ್ಕಾರಿ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಾರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದ ಎಲ್ಲಾ ಸರ್ಕಾರಿ ಇಲಾಖೆಗಳು ಕಚೇರಿಗಳು, ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು.
ರಾಜ್ಯ ಸರ್ಕಾರಿ ನೌಕರರು ಮುಂಚಿತವಾಗಿಯೆ ಮುಷ್ಕರದ ಘೋಷಣೆ ಮಾಡಿದ್ದರಿಂದ ಇಲಾಖೆಗಳ ಕಚೇರಿಗಳು ಬೆಳಿಗ್ಗೆಯಿಂದಲೇ ಬಾಗಿಲು ತೆಗೆಯದೆ ಬಾಗಿಲು ಮುಚ್ಚಿದ್ದವು.
ಎಲ್ಲಾ ಸರ್ಕಾರಿ ನೌಕರರು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಮನೆಯಲ್ಲಿ ಕುಳಿತು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರ ನಡೆಸಿದ್ದರಿಂದ ಎಲ್ಲಾ ಕಚೇರಿ ಆವರಣ, ನಗರ ಪ್ರದೇಶ, ವಾಣಿಜ್ಯ ಸಂಕಿರ್ಣಗಳು ಖಾಲಿ ಖಾಲಿಯಾಗಿದ್ದವು.
ಅಗತ್ಯ ಸೇವೆಗಳನ್ನು ಕೊಡಲು ಆರೋಗ್ಯ ಇಲಾಖೆಯ ಆಸ್ಪತ್ರೆಗಳು ಮಾತ್ರ ತೆರೆದಿದ್ದವು, ನೌಕರರು ಕೆಲಸಕ್ಕೆ ಗೈರು ಹಾಜರಾಗಿದ್ದರಿಂದ ಸರ್ಕಾರಿ ಆಸ್ಪತ್ರೆಯ ಆವರಣವು ಖಾಲಿಯಾಗಿತ್ತು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಶಿವಲಿಂಗೇಗೌಡ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಎಲ್ಲಾ ಕಚೇರಿಗಳು, ಇಲಾಖೆಗಳು, ಬ್ಯಾಂಕ್ ಮತ್ತಿತರ ಸರ್ಕಾರಿ ಸೇವೆಗಳು ಇರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.