ಸರ್ಕಾರಿ ಕಚೇರಿಗಳಲ್ಲಿ ಪ್ರಿಪೇಡ್ ಮೀಟರ್ ಅಳವಡಿಕೆ

ಹುಬ್ಬಳ್ಳಿ, ಆ.2: ಬೇಡಿಕೆಗೆ ಅನುಗುಣವಾಗಿ ಒಂದು ವರ್ಷದ ಅವಧಿಯಲ್ಲಿ ಹೊಸದಾಗಿ 37 ಕಡೆಗಳಲ್ಲಿ ವಿದ್ಯುತ್ ಸಬ್ ಸ್ಟೇಷನ್‍ಗಳನ್ನು ನಿರ್ಮಿಸಲಾಗುವುದು. ಗ್ರಾಹಕರಿಗೆ ತೊಂದರೆಯಾಗದಂತೆ ವಿದ್ಯುತ್ ಸರಬರಾಜು ಮಾಡಬೇಕು. ಸರ್ಕಾರಿ ಕಚೇರಿಗಳಲ್ಲಿ ಪ್ರಿ ಪೇಡ್(ಮುಂಚಿತವಾಗಿ ಪಾವತಿಸಿದ) ಮೀಟರ್ ಅಳವಡಿಸಲು ಕ್ರಮ ವಹಿಸಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ಹುಬ್ಬಳ್ಳಿಯ ದೇಶಪಾಂಡೆ ಫೌಂಡೆಶನ್‍ನಲ್ಲಿಂದು ಹೆಸ್ಕಾಂ ವತಿಯಿಂದ ಆಯೋಜಿಸಲಾಗಿದ್ದ ಹೊಸದಾಗಿ ನೇಮಕಗೊಂಡು, ತರಬೇತಿ ಪಡೆಯುತ್ತಿರುವ ಕಿರಿಯ ಪವರ್ ಮ್ಯಾನ್‍ಗಳಿಗೆ ಶುಭ ಹಾರೈಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು, ಮುಧೋಳ, ಬೀಳಗಿ ಮತ್ತು ಸಿಂದಗಿಗಳಲ್ಲಿ 110 ಕೆವಿ ಸ್ಟೇಶನ್ ಉದ್ಘಾಟಿಸಲಾಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಬಾಕಿ ಇರುವ ವಿದ್ಯುತ್ ಬಿಲ್ ಸಂಗ್ರಹಕ್ಕೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಪ್ರಿ ಪೇಡ್ ಮೀಟರ್ ಗಳನ್ನು ಅಳವಡಿಸಲು ಆಲೋಚಿಸಲಾಗಿದೆ. ಈಗಾಗಲೇ 1008 ಕಡೆಗಳಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.