
ಮಂಡ್ಯ: ಫೆ.27:- ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅತ್ಯಂತ ಕನಿಷ್ಠ ವೇತಕ್ಕೆ ದುಡಿಯುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಆಧುನಿಕ ಜೀತಪದ್ದತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಕಾಯಕಯೋಗಿ ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಹೆಚ್.ಎಸ್.ಇಂದೂಧರ್ ವಿಷಾದ ವ್ಯಕ್ತಪಡಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರೊಂದಿಗೆ ರಾಜ್ಯ ಮಟ್ಟದ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಬೃಹತ್ ಸಮಾವೇಶ ಆಯೋಜನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗುತ್ತಿಗೆ ನೌಕರರು ಎದುರಿಸುತ್ತಿರುವ ಜಟಿಲ ಸಮಸ್ಯೆಗಳನ್ನು ಪರಿಹರಿಸಲು ಹೋರಾಟ ನಡೆಸುವ ಉದ್ದೇಶದಿಂದ ಮಂಡ್ಯದಲ್ಲಿ ಮಾರ್ಚ್ 11ರಂದು ರಾಜ್ಯ ಮಟ್ಟದ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು ಎಲ್ಲಾ ಜಿಲ್ಲೆಗಳಿಂದ ಗುತ್ತಿಗೆ ನೌಕರರು ಆಗಮಿಸಬೇಕೆಂದು ಮನವಿ ಮಾಡಿದರು. ಕಳೆದ ಹಲವಾರು ವರ್ಷಗಳಿಂದ ನೌಕರರ ಬೇಡಿಕೆಯನ್ನು ಈಡೇರಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಸೆಳೆದಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಮುಖ್ಯಮಂತ್ರಿಗಳು ಬಜೆಟ್‍ನಲ್ಲಿಯೂ ನಿರಾಸೆ ಮೂಡಿಸಿದ್ದಾರೆ. ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಇಲ್ಲದೆ ಅತಂತ್ರರಾಗಿದ್ದಾರೆ ಎಂದರು.
ಬೆಂಬಲ : ಮಾರ್ಚ್ 1ರಿಂದ ಸರ್ಕಾರಿ ನೌಕರರು 7ನೇ ವೇತನ ಆಯೋಗ ಜಾರಿಗೆ ನಡೆಸುತ್ತಿರುವ ಮುಷ್ಕರಕ್ಕೆ ತಾವು ಸಹ ಬೆಂಬಲ ನೀಡುತ್ತಿರುವುದಾಗಿ ತಿಳಿಸಿದ ಅವರು, ದಿನನಿತ್ಯ ಸರ್ಕಾರಿ ನೌಕರರ ಜೊತೆಯಲ್ಲೇ ಅವರಿಗೆ ಸರಿಸಮನಾಗಿ ದುಡಿಯುತ್ತಿರುವ ಗುತ್ತಿಗೆ ನೌಕರರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಕಾಯ್ದೆಯನ್ವಯ ವೇತನವನ್ನು ನೀಡಬೇಕೆಂದು ಆಗ್ರಹಿಸಿದರು. ಪ್ರತಿ ಮಾಹೆಯ 5ನೇ ತಾರೀಖಿನೊಳಗೆ ವೇತನವನ್ನು ಪಾವತಿಸಬೇಕು, ಪಿ.ಎಫ್ ಹಾಗೂ ಇ.ಎಸ್.ಐ ವಂತಿಕೆಗಳನ್ನು ಪ್ರತಿ ಮಾಹೆ ಜಮಾ ಮಾಡಬೇಕೆಂದು ಅವರು ಒತ್ತಾಯಿಸಿದರು. ಪಿ.ಎಫ್‍ನ ಯು.ಎ.ಎನ್ ಕಾರ್ಡ್ ಹಾಗೂ ಇ.ಎಸ್.ಐ ಪಾಲಿಸಿಯ ಕಾರ್ಡ್ ವಿತರಿಸದೆ ವಂಚಿಸಲಾಗುತ್ತಿದೆ. ನೌಕರರಿಗೆ ಹೆಚ್ಚಿನ ಕೆಲಸಗಳನ್ನು ಮಾಡುವಂತೆ ಒತ್ತಡವನ್ನು ನೀಡಿ, ಮಾನಸಿಕವಾಗಿ ಕುಗ್ಗುವ ಹಾಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ಬದ್ಧ ಸೌಲಭ್ಯಗಳನ್ನು ನೀಡಲು ಪ್ರಶ್ನಿಸಿದರೆ, ಕೆಲಸದಿಂದ ತೆಗೆದು ಹಾಕುವುದಾಗಿ ದೌರ್ಜನ್ಯ ನಡೆಸುವುದು. ಕಾನೂನು ರೀತ್ಯಾ ನ್ಯಾಯಯುತ ರಜೆಯನ್ನು ಮಂಜೂರು ಮಾಡದೇ ನೌಕರರನ್ನು ಶೋಷಣೆ ಮಾಡಲಾಗುತ್ತಿದೆ. ಹೊರಗುತ್ತಿಗೆ ಮಹಿಳಾ ನೌಕರರಿಗೆ ಮಾತೃತ್ವ ರಜೆ ನೀಡುತ್ತಿಲ್ಲ. ಕಡಿಮೆ ವೇತನಕ್ಕೆ ಅತೀ ಹೆಚ್ಚಿನ ಕೆಲಸವನ್ನು ಮಾಡಲು ಮಾನಸಿಕವಾಗಿ ಒತ್ತಡ ಹೇರುತ್ತಿರುವುದರಿಂದ ಆತ್ಮಹತ್ಯೆ ಹಾದಿ ಹಿಡಿಯುವ ಪರಿಸ್ಥಿತಿ ಬಂದೊದಗಿದೆ ಎಂದರು. ನೌಕರರ ಹಿತದೃಷ್ಟಿಯಿಂದ ಇದುವರೆವಿಗೂ ಯಾವುದೇ ಕಾನೂನುಗಳನ್ನು ಜಾರಿಗೆ ತಂದಿಲ್ಲ. ಹೊರಗುತ್ತಿಗೆ ಏಜೆನ್ಸಿ ಪಡೆದ ಖಾಸಗಿ ಸಂಸ್ಥೆಯವರು ನೌಕರರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದಿರುವುದು ಅಮಾನವೀಯ ಎಂದರು.
ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ರಾಜ್ಯದ ಶಾಸಕರು, ಮಂತ್ರಿಗಳು ತಮ್ಮ ವೇತನವನ್ನು ಹೆಚ್ಚಳ ಮಾಡಿಕೊಳ್ಳುವ ಸ್ವಹಿತಾಕ್ತಿಯ ಜೊತೆಗೆ ರಾಜ್ಯಾದ್ಯಂತ 8 ಲಕ್ಷಕ್ಕೂ ಅಧಿಕ ಗುತ್ತಿಗೆ ನೌಕರರು ದಿನಗೂಲಿಗಿಂತಲೂ ಕಡಿಮೆ ವೇತನದಲ್ಲಿ ದುಡಿಯುತ್ತಿರುವುದನ್ನು ಗಮನಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ನೌಕರರ ಅಳಲನ್ನು ಅರಿತು ಸಮಸ್ಯೆಗೆ ಸ್ಪಂದಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಗುತ್ತಿಗೆ ನೌಕರರಿಗೆ 60 ವರ್ಷದ ವಯಸ್ಸಿವ ವರೆಗೆ ಸೇವಾ ಭದ್ರತೆಯನ್ನು ಒದಗಿಸಬೇಕು, ಮಾಸಿಕ 25,000/-ಗಳ ಕನಿಷ್ಟ ವೇತನವನ್ನು ನಿಗಧಿಪಡಿಸಬೇಕು ಎಂದು ಒತ್ತಾಯಿಸಿದರು.