
ಕಲಬುರಗಿ,ಮೇ.19: ನಗರದಲ್ಲಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ವಿವಿಧ ಕೋರ್ಸ್‍ಗಳ ಪ್ರವೇಶಾತಿ ಆರಂಭವಾಗಿದ್ದು, ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾದವರು ಕೋರ್ಸ್‍ಗಳಿಗೆ ಪ್ರವೇಶ ಪಡೆಯಬಹುದು ಎಂದು ಜಯರಾಜ್ ನರಗುಂದ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು ಇಂತಹ 30 ಕೇಂದ್ರಗಳಿವೆ. ನಗರದಲ್ಲಿ 30 ಸೀಟುಗಳಿಂದ ಕಳೆದ 1972ರಲ್ಲಿ ಡೆನ್ಮಾರ್ಕ್ ಸರ್ಕಾರದ ಡ್ಯಾನಿಡಾ ನಡುವಿನ ಒಪ್ಪಂದಕ್ಕೆ ಅನುಗುಣವಾಗಿ ಆರಂಭಿಸಿವೆ. ನಾಲ್ಕು ವರ್ಷ ಕೋರ್ಸ್‍ಗಳು ಇದ್ದು, ಮೂರು ವರ್ಷ ಕೋರ್ಸ್, ಒಂದು ವರ್ಷ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದು ಅನೇಕರು ಒಳ್ಳೆಯ ಸ್ಥಾನಮಾನದಲ್ಲಿದ್ದಾರೆ. ಆಸ್ಟ್ರೇಲಿಯಾ, ಜರ್ಮನಿ, ಸ್ಟಿಡ್ಜರ್‍ಲೆಂಡ್, ಮಲೇಶಿಯಾ, ಸಿಂಗಪುರಗಳಿಗೆ ಹೋಗಿದ್ದಾರೆ. ಅಫಜಲಪುರ, ಚಿತ್ತಾಪುರ ಸೇರಿದಂತೆ ವಿವಿಧೆಡೆಯವರು ತರಬೇತಿ ಪಡೆದು ವರ್ಷಕ್ಕೆ 18 ಲಕ್ಷ ರೂ.ಗಳ ವೇತನ ಪಡೆಯುತ್ತಿದ್ದಾರೆ ಎಂದರು.
ನುರಿತ ಮಾನವ ಸಂಪನ್ಮೂಲವನ್ನು ಕೈಗಾರಿಕಾ ಕ್ಷೇತ್ರಕ್ಕೆ ಒದಗಿಸುವುದು, ಕೈಗಾರಿಕಾ ಸಂಸ್ಥೆಗಳ ಅಭಿವೃದ್ಧಿಗೆ ತಂತ್ರಜ್ಞಾನ ಮತ್ತು ತರಬೇತಿಗಳ ನೆರವು ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ತರಬೇತಿ ನೀಡಲಾಗುತ್ತದೆ. ಉಪಕರಣಗಳ, ಅಚ್ಚು ಮತ್ತು ಎರಕಗಳು, ಕ್ಲಿಷ್ಟಕರವಾದ ಬಿಡಿ ಭಾಗಗಳ ತಯಾರಿಕೆ ಮಾಡಲಾಗುವುದು. ಮಾರುಕಟ್ಟೆ ಅಭಿವೃದ್ಧಿ, ತಂತ್ರಜ್ಞಾನ ಮತ್ತು ತರಬೇತಿಗಳ ನೆರವು, ಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣ ಅಭ್ಯರ್ಥಿಗಳಿಗೆ ಆರ್ಥಿಕ ಸ್ವಾವಲಂಬನೆ ಹೊಂದಲು ಅಗತ್ಯವಾಗಿ ಬೇಕಿರುವ ತರಬೇತಿಯನ್ನು ಸಹ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.
ಡಿಪ್ಲೋಮಾ ಇನ್‍ಟೂಲ್ ಆಂಡ್ ಡೈ ಮೇಕಿಂಗ್ ಮತ್ತು ಡಿಪ್ಲೋಮಾ ಇನ್ ಪ್ರಿಸಿಷನ್ ಮ್ಯಾನ್ಯುಫ್ಯಾಕ್ಟರಿಂಗ್ ಕೋರ್ಸ್‍ಗಳು ಸಂಸ್ಥೆಯಲ್ಲಿ ಇದ್ದು, ನಾಲ್ಕು ವರ್ಷಗಳ ಅವಧಿಯದ್ದಾಗಿದೆ. ಸಂಸ್ಥೆಯಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿಗಳನ್ನು ನಾಲ್ಕನೇ ವರ್ಷದಲ್ಲಿ ಕಡ್ಡಾಯ ಕೈಗಾರಿಕಾ ತರಬೇತಿಯನ್ನು ಪಡೆಯಲು ವಿವಿಧ ಕೈಗಾರಿಕೆಗಳಿಗೆ ನಿಯೋಜಿಸಲಾಗುವುದು. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ತರಬೇತಿ ಭತ್ಯೆಯಾಗಿ 15000ರೂ.ಗಳಿಂದ 20,000ರೂ.ಗಳವರೆಗೆ ಭತೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಕೇಂದ್ರವು ಸರ್ಕಾರಿ ಪ್ರಾಯೋಜಿತ ಎಸ್‍ಸಿಪಿ, ಟಿಎಸ್‍ಪಿ, ಸಿಎಂಕೆಕೆವೈ, ಅಮೃತ್ ಮನ್ನಡೆ ಎಂಬ ಕೌಶಲ್ಯ ಕಾರ್ಯಕ್ರಮಗಳನ್ನೂ ಸಹ ಹಮ್ಮಿಕೊಂಡಿದೆ. ಹಾಗಾಗಿ ಫಿಟ್ಟರ್, ಟರ್ನರ್, ಮಿಲ್ಲರ್, ಗ್ರಿಂಡರ್, ಟೂಲ್ ರೂಮ್ ಮೆಕ್ಯಾನಿಸ್ಟ್, ಸಿಎನ್‍ಸಿ ಪ್ರೋಗ್ರಾಂ ಆಂಡ್ ಆಪರೇಷನ್ಸ್, ಅಡ್ವಾನ್ಸ್ ಮೆಕ್ಯಾನಿಸ್ಟ್, ಸಿಎನ್‍ಸಿ ಟರ್ನಿಂಗ್, ಸಿಎನ್‍ಸಿ ಮಿಲ್ಲಿಂಗ್, ಸಿಎನ್‍ಸಿ ಟೆಕ್ನಾಲಾಜಿಸ್ಟ್, ಸಿಎಡಿ ಕ್ಯಾಮ್, ಮೆಟ್ರಾಲಾಜಿ ಆಂಡ್ ಮೇಜರ್‍ಮೆಂಟ್ ಸಿಸ್ಟಮ್, ಸೋಲ್ಡ್ ವರ್ಕ್ ಆಂಡ್ ಆಟೋ ಕ್ಯಾಡ್ ಮುಂತಾದ ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕೇಂದ್ರದಲ್ಲಿ ಇಲ್ಲಿಯವರೆಗೆ ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚು (10729) ವಿದ್ಯಾರ್ಥಿಗಳಿಗೆ ದೀರ್ಘಾವಧಿ ಮತ್ತು ಅಲ್ಪಾವಧಿಯಲ್ಲಿ ತೆರಬೇತಿಯನ್ನು ನೀಡಲಾಗಿದೆ. ಪ್ರವೇಶಾತಿಯಲ್ಲಿ ಶೇಕಡಾ 30ರಷ್ಟು ಸೀಟುಗಳನ್ನು ವಿದ್ಯಾರ್ಥಿನಿಯರಿಗೆ ಮೀಸಲಿಡಲಾಗಿದೆ. ಪ್ರವೇಶಾತಿಗಳು ಆರಂಭಗೊಂಡಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಸೀಮಿತ ಸೀಟುಗಳು ಮಾತ್ರ ಇವೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಿನ್ಸಿಪಾಲ್ ಸುಧಾರಾಣಿ ಎಸ್. ಅಟ್ಟೂರ್ ಮುಂತಾದವರು ಉಪಸ್ಥಿತರಿದ್ದರು.