ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ ತಡೆಗೆ ಷಡ್ಯಂತ್ರ: ಆರೋಪ

ಅರಸೀಕೆರೆ, ಏ. ೩- ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ ಕಾಮಗಾರಿಯು ತಾಲ್ಲೂಕಿನ ಲಕ್ಷ್ಮಿದೇವರಹಳ್ಳಿ ಗೇಟ್ ಬಳಿ ನಡೆಯುತ್ತಿದ್ದು, ಇದನ್ನು ಬಿಜೆಪಿಯ ಕೆಲ ಮುಖಂಡರು ಎಂಜಿನಿಯರಿಂಗ್ ಕಾಲೇಜು ನಿರ್ಮಾಣ ತಡೆಗೆ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಆರೋಪಿಸಿದರು.
ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಬಿ ಎಚ್ ರಸ್ತೆಯಲ್ಲಿನ ಲಕ್ಷ್ಮಿದೇವರಹಳ್ಳಿ ಗೇಟ್ ಬಳಿಯಲ್ಲಿ ೧೫ ಎಕರೆ ಪ್ರದೇಶದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಮೊದಲ ಹಂತದಲ್ಲಿ ೫೮ ಕೋಟಿ ರೂ. ಬಿಡುಗಡೆಯಾಗಿದೆ. ಗುತ್ತಿಗೆ ನೀಡಲಾಗಿದೆ. ಆದರೆ ಇತ್ತೀಚೆಗೆ ಕಟ್ಟಡದ ಪಕ್ಕದ ಸ್ಥಳದಲ್ಲಿ ಪುರಾತನ ಶಿಲಾಶಾಸನ ಹಾಗೂ ವಿಗ್ರಹಗಳು ಪತ್ತೆಯಾಗಿದ್ದು, ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಶಾಸಕರು, ಸಮ್ಮಿಶ್ರ ಸರ್ಕಾರದಲ್ಲಿ ಕ್ಷೇತ್ರಕ್ಕೆ ಮಂಜೂರಾಗಿದ್ದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡದ ಕಾಮಗಾರಿ ಪ್ರಾರಂಭದಿಂದಲೂ ಮುಖಂಡರು ಅಡ್ಡಿಪಡಿಸುತ್ತಿದ್ದಾರೆ. ಇದಕ್ಕೆ ಬಿಜೆಪಿಯ ಕೆಲ ನಾಯಕರ ಪರೋಕ್ಷ ಬೆಂಬಲವಿದೆ. ಇಂಜಿನಿಯರಿಂಗ್ ಕಾಲೇಜು ನಿರ್ಮಾಣದ ಪಕ್ಕದ ಜಮೀನಿನಲ್ಲಿ ಪುರಾತನ ಶಿಲಾಶಾಸನ ಮತ್ತು ವಿಗ್ರಹಗಳು ಪತ್ತೆಯಾಗಿವೆ ಎಂಬ ಸುದ್ದಿ ಹರಡುತ್ತಿದ್ದಂತೆ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಹಾಗೂ ಮೈಸೂರಿನ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಿಲಾಶಾಸನ ಮತ್ತು ವಿಗ್ರಹಗಳು ಸಿಕ್ಕಿರುವ ಪ್ರದೇಶಕ್ಕೂ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ ಪ್ರದೇಶಕ್ಕೂ ಸಂಬಂಧವಿಲ್ಲ ಎಂದು ಹೇಳಿ ಕಟ್ಟಡಗಳ ಕಾಮಗಾರಿ ನಡೆಸುವಂತೆ ಸೂಚಿಸಿದ್ದಾರೆ ಎಂದರು.
ಕಳೆದ ಎರಡು ದಿನಗಳ ಹಿಂದೆ ಇಟಾಚಿ ಯಂತ್ರ ಚಾಲಕನ ಮೇಲೆ ಕೆಲ ಬಿಜೆಪಿ ಮುಖಂಡರ ಹಿಂಬಾಲಕರು ದೈಹಿಕವಾಗಿ ಹಲ್ಲೆ ಮಾಡಿರುವುದಲ್ಲದೆ ಗುತ್ತಿಗೆದಾರರಿಗೆ ಬೆದರಿಕೆಯನ್ನು ಹಾಕುವ ಮೂಲಕ ನಡೆಯುತ್ತಿದ್ದ ಕಾಮಗಾರಿಯನ್ನು ನಿಲ್ಲಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಮುಕ್ತಾಯವಾದ ನಗರಸಭೆಯ ೧೨ ನೇ ವಾರ್ಡ್‌ನ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋತಿದ್ದರು ಜನರ ತೀರ್ಪನ್ನು ಸ್ವಾಗತಿಸುತ್ತೇನೆ. ಆದರೆ ಗೆಲುವಿಗಾಗಿ ಬಿಜೆಪಿ ನಾಯಕರು ಅನುಸರಿಸಿದ ಮಾರ್ಗ ನನಗೆ ಗೊತ್ತಿದೆ ಈ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ. ಆದರೆ ಚುನಾವಣೆಯ ಮತದಾನದ ಬಳಿಕ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು ಶಾಸಕರು ಗುಂಡಾ ರಾಜಕಾರಣ ಮಾಡುತ್ತಿದ್ದಾರೆ ಎಂಬ ಸುಳ್ಳು ಆರೋಪ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯ ಅಸ್ತಿತ್ವಕ್ಕಾಗಿ ಸುಳ್ಳು ಆರೋಪಗಳ ಮೂಲಕ ಸಮಾಜದ ಸಾಮರಸ್ಯವನ್ನು ಹಾಳು ಮಾಡುವುದು, ಗದ್ದಲ, ಗಲಾಟೆ ಸೃಷ್ಟಿಸಿ ಸಮಾಜದ ನಡುವೆ ವಿಷಬೀಜ ಬಿತ್ತುವ ವಾಮಮಾರ್ಗದ ರಾಜಕಾರಣವನ್ನು ಮಾಡುತ್ತೇನೆ ಎಂದು ಬಂದರೆ ಈ ಕ್ಷೇತ್ರದಲ್ಲಿ ನಡೆಯುವುದಿಲ್ಲ. ಅಂತೆಯೇ ಇದನ್ನೆಲ್ಲಾ ಸಹಿಸಿಕೊಳ್ಳಲು ಆಗುವುದಿಲ್ಲ. ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಯತೀಶ್‌ಕುಮಾರ್, ಟಿಎಪಿಸಿಎಂಸ್ ಅಧ್ಯಕ್ಷ ಕುಮಾರ್, ಗ್ರಾ.ಪಂ. ಸದಸ್ಯ ಚನ್ನಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.