ಸರ್ಕಾರಿ ಆಸ್ಪತ್ರೆಯಲ್ಲಿ ಲಂಚ ಖಂಡಿಸಿ ರೈತರ ಪ್ರತಿಭಟನೆ

ಕೋಲಾರ, ಆ.೩- ಮುಳಬಾಗಿಲು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹೆಜ್ಜೆ ಹೆಜ್ಜೆಗೂ ಜನಸಾಮಾನ್ಯರನ್ನು ಲಂಚಕ್ಕೆ ಪೀಡಿಸುವ ಸಿಬ್ಬಂದಿ ವಿರುದ್ಧ ಕ್ರಮಕೈಗೊಂಡು ನಕಲಿ ಕ್ಲಿನಿಕ್ ವೈದ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ರೈತಸಂಘದಿಂದ ತಾಲೂಕು ಆಸ್ಪತ್ರೆ ಮುಂದೆ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಹೋರಾಟ ನಡೆಸಿ, ತಾಲೂಕು ವೈದ್ಯಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಆರೋಗ್ಯವೇ ಭಾಗ್ಯ ಎಂಬುದು ಅನಾರೋಗ್ಯದ ಭಾಗ್ಯವಾಗಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೆ ಕೆಲಸವಿಲ್ಲದೆ ವ್ಯರ್ಥವಾಗಿ ಜನರ ತೆರಿಗೆ ಹಣದಲ್ಲಿ ಲಕ್ಷಲಕ್ಷ ಸಂಬಳ ಕೊಡುವ ಸರ್ಕಾರ ಬಡ ಕೂಲಿ ಕಾರ್ಮಿಕರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆಯೇ ಎಂಬುದನ್ನು ತನಿಖೆ ಮಾಡುವಲ್ಲಿ ವಿಫಲವಾಗಿದೆ. ಕಿರಿಯ ಅಧಿಕಾರಿಯಿಂದ ಹಿಡಿದು ೨೨೪ ಜನ ಮೂರ್ಖರು ಇರುವ ವಿಧಾನಸೌಧದವರೆಗೂ ಜನಸಾಮಾನ್ಯರನ್ನು ಸುಲಿಗೆ ಮಾಡಿ ಲಂಚ ಪಡೆದು ಬಡವರ ಆರೋಗ್ಯವನ್ನು ಕಸಿದುಕೊಳ್ಳುವುದಕ್ಕೆ ಹಿರಿಯ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿರುವುದು ದುರದೃಷ್ಠಕರ ಎಂದು ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅಸಮಧಾನ ವ್ಯಕ್ತಪಡಿಸಿದರು.
ಹೆರಿಗೆಗೆ ಸರ್ಕಾರಿ ಆಸ್ಪತ್ರೆಯನ್ನು ನಂಬಿ ಬರುವ ಬಡವರು ಮಗು ಪಾಪಿ ಪ್ರಪಂಚಕ್ಕೆ ಕಾಲಿಡಬೇಕಾದರೆ ಲಂಚವೆಂಬ ವೈರಸ್ ಇಲ್ಲದೆ ಹೆರಿಗೆಯಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗಬೇಕಾದರೆ ೧೦ ಸಾವಿರದಿಂದ ೩೦ ಸಾವಿರ ನೀಡಿದರೆ ರಾಜಮರ್ಯಾದೆ. ಅದೇ ಹೆರಿಗೆ ಖಾಸಗಿ ಆಸ್ಪತ್ರೆಯಲ್ಲಿ ಆಗಬೇಕಾದರೆ ಕನಿಷ್ಠ ೬೦ ಸಾವಿರದಿಂದ ೧.೫ ಲಕ್ಷದವರೆಗೆ. ಇದು ಇಂದಿನ ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಹಗಲು ದರೋಡೆ ಎಂದು ಕಿಡಿಕಾರಿದರು.
ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ನೋಂದಣಿ ಮಾಡುವ ಕೌಂಟರ್‍ನಲ್ಲಿ ೫ ರೂಪಾಯಿಯಿಂದ ೨೦ ರೂಪಾಯಿವರೆಗೆ ಸುಲಿಗೆ ಮಾಡಿ ಆಸ್ಪತ್ರೆ ಅಭಿವೃದ್ಧಿಗೆಂದು ಮೀಸಲಿಟ್ಟಿದ್ದೇವೆಂದು ಸುಲಿಗೆ ಮಾಡುವ ಜೊತೆಗೆ ಪ್ರತಿಯೊಂದು ಪರೀಕ್ಷೆಯೂ ಸಹ ನಾಯಿಕೊಡೆಗಳಂತೆ ತಲೆ ಎತ್ತಿರುವ ಲ್ಯಾಬ್‌ಗಳ ಮಾಲೀಕರ ಜೊತೆ ವೈದ್ಯರು ಶಾಮೀಲಾಗಿ ಹೊರಗಡೆ ಚೀಟಿ ಬರೆದು ಶೋಷಣೆ ಮಾಡುವ ಜೊತೆಗೆ ಊಟ, ಔಷಧಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಜೊತೆಗೆ ಕಳಪೆ ಗುಣಮಟ್ಟದ ಆಹಾರ ನೀಡುವ ಮುಖಾಂತರ ಬಡ ರೋಗಿಗಳ ಶೋಷಣೆ ನಿರಂತರವಾಗಿದೆ ಎಂದು ಆರೋಪ ಮಾಡಿದರು.
ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ವಿಭಾಗೀಯ ಕಾರ್ಯದರ್ಶಿ ಫಾರೂಖ್ ಪಾಷ, ರಾಜ್ಯ ಮುಖಂಡ ಬಂಗಾರಿ ಮಂಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲಗಾಣಿ ವಿಜಯ್‌ಪಾಲ್, ವಿಶ್ವ, ಭಾಸ್ಕರ್, ಸುನೀಲ್‌ಕುಮಾರ್, ರಾಜೇಶ್, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಯುವ ರೈತ ಮುಖಂಡ ಪೊಂಬರಹಳ್ಳಿ ನವೀನ್, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಯುವ ರೈತ ಮುಖಂಡ ನಂಗಲಿ ಕಿಶೋರ್, ಅಣ್ಣಿಹಳ್ಳಿ ನಾಗರಾಜ್, ಅಂಬ್ಲಿಕಲ್ ಮಂಜುನಾಥ್, ಲಾಯರ್ ಮಣಿ, ಜುಬೇದ್ ಪಾಷ,ಗುರು, ಶ್ರೀಕಾಂತ್, ಮುಂತಾದವರಿದ್ದರು