ಸರ್ಕಾರಿ ಅನುದಾನ ಸಂಸದ, ಶಾಸಕರ ಪ್ರಚಾರ : ಸುಪ್ರೀಂ – ಹೈಕೋರ್ಟ್ ಆದೇಶಕ್ಕೂ ಕಿಮ್ಮತ್ತು ನೀಡದ ಆಡಳಿತ

ನೀರಿನ ಟ್ಯಾಂಕ್, ಬಸ್ ನಿಲ್ದಾಣ, ರಸ್ತೆ ಇನ್ನಿತರ ಸಾರ್ವಜನಿಕ ಯೋಜನೆಗಳಿಗೆ ಭಾವಚಿತ್ರ – ಹೆಸರು ನಿರ್ಬಂಧಕ್ಕೆ ಸೂಚನೆ
ರಾಯಚೂರು.ಜು.೨೧- ಸರ್ಕಾರಿ ಅನುದಾನದಲ್ಲಿ ನಿರ್ಮಿಸಲಾದ ಬಸ್ ನಿಲ್ದಾಣ, ವಾಟರ್ ಟ್ಯಾಂಕ್ ಇನ್ನಿತರ ಸಾರ್ವಜನಿಕ ಯೋಜನೆಗಳಿಗೆ ಸಂಸದರು, ಶಾಸಕರು ಹಾಗೂ ಇನ್ನಿತರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಭಾವಚಿತ್ರ ಹಾಕುವುದನ್ನು ನಿರ್ಬಂಧಿಸಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶಿಸಿದ್ದರೂ, ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಡಳಿತರೂಢ ಮತ್ತು ಹಿಂದಿನ ಸರ್ಕಾರದ ಅವಧಿಯ ಜನಪ್ರತಿನಿಧಿಗಳ ಭಾವಚಿತ್ರ ಮತ್ತು ಹೆಸರುವುಳ್ಳ ನಾಮಫಲಕಗಳು ವರ್ಷಗಳಿಂದ ಮುಂದುವರೆಯುತ್ತಿದ್ದರೂ, ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ.
ಜಿಲ್ಲೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳಿಗೆ ಬೆಲೆಯೆ ಇಲ್ಲದಂತೆ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಸರ್ಕಾರಿ ಅನುದಾನದಲ್ಲಿ ಬಸ್ ಸ್ಟ್ಯಾಂಡ್ ಸೇರಿದಂತೆ ಕುಡಿವ ನೀರಿನ ಟ್ಯಾಂಕ್ ಹಾಗೂ ಇನ್ನಿತರ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಮತ್ತು ಸಂಸದರು ಹಾಗೂ ಸ್ಥಳೀಯ ಸಂಸ್ಥೆಯ ಅಧ್ಯಕ್ಷರ ಹೆಸರು ಮತ್ತು ಭಾವಚಿತ್ರಗಳನ್ನು ಹಾಕಲಾಗುತ್ತದೆ. ಈ ರೀತಿಯ ಭಾವಚಿತ್ರ ಪ್ರದರ್ಶನವನ್ನು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಿರ್ಬಂಧಿಸಿ ಆದೇಶಿಸಿವೆ.
ಆದರೂ, ಜಿಲ್ಲೆಯಲ್ಲಿ ಅಧಿಕಾರಿಗಳು ಆಡಳಿತರೂಢ ಸಂಸದರು, ಶಾಸಕರು ಮತ್ತು ಮುಖಂಡರ ಮುಲಾಜು ಕಾಯಲು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ನೇರವಾಗಿ ಸುಪ್ರೀಂ ಮತ್ತು ಹೈಕೋರ್ಟ್ ಆದೇಶ ಉಲ್ಲಂಘನೆಯಾಗಿದೆ. ರಾಜಕೀಯ ದ್ವೇಷದ ಹೆಸರಿನಲ್ಲಿ ಇತರೆ ವ್ಯಕ್ತಿಗಳ ಫ್ಲಕ್ಸ್, ಬ್ಯಾನರ್ ತೆರವುಗೊಳಿಸುವಲ್ಲಿ ತೋರುವ ಆಸಕ್ತಿ ಅಧಿಕಾರಿಗಳು ಸುಪ್ರೀಂ ಮತ್ತು ಹೈಕೋರ್ಟ್ ಆದೇಶ ಪಾಲಿಸದಿರುವುದು ಗಮನಾರ್ಹವಾಗಿದೆ.
ದೇಶ ಮತ್ತು ರಾಜ್ಯದ ಸರ್ವೋಚ್ಛ ನ್ಯಾಯಾಲಯಗಳು ಸ್ಪಷ್ಟವಾಗಿ ತಮ್ಮ ಆದೇಶದಲ್ಲಿ ಯಾವ ಸಾರ್ವಜನಿಕ ಸ್ಥಳಗಳಲ್ಲಿ ಜನಪ್ರತಿನಿಧಿಗಳು ಭಾವಚಿತ್ರ ಮತ್ತು ಹೆಸರು ಇರಬಾರದು ಎನ್ನುವುದನ್ನು ಉಲ್ಲೇಖಿಸಿ, ರಸ್ತೆ, ಕುಡಿವ ನೀರಿನ ಘಟಕ, ಮೇಲ್ಸೇತುವೆ ಸೇರಿ ಬಸ್ ಸ್ಟ್ಯಾಂಡ್, ಶೌಚಾಲಯ, ಆಟದ ಮೈದಾನ ಮತ್ತು ಉದ್ಯಾನವನಗಳಿಗೆ ಅಳವಡಿಸಿದ ಜಾಹೀರಾತುಗಳಲ್ಲಿ ಜನಪ್ರತಿನಿಧಿಗಳ ಮತ್ತು ರಾಜಕೀಯ ಮುಖಂಡರು ಹೆಸರುಗಳನ್ನು ಹಾಗೂ ಫೋಟೋಗಳನ್ನು ಹಾಕುವುದು ನಿಯಮ ಬಾಹೀರ ಎಂದು ಪ್ರಕಟಿಸಿದೆ.
ಜನರ ತೆರಿಗೆ ಹಣದಲ್ಲಿ ತಮ್ಮ ವೈಯಕ್ತಿಕ ಲಾಭಕ್ಕೆ ಯುವ ಜನರ ಹೆಸರು ಬಳಸಿಕೊಳ್ಳುವುದು ಮತ್ತು ಇದು ತಮ್ಮ ಸಾಧನೆ ಎಂದು ಬಿಂಬಿಸುವುದು ಯಾವ ನ್ಯಾಯವೆಂದು ನ್ಯಾಯಾಲಯ ಪ್ರಶ್ನಿಸಿದೆ. ಸರ್ಕಾರದ ಹಣದಲ್ಲಿ ಮಾಡಿದ ಯೋಜನೆಗಳು ಯಾವುದೇ ವ್ಯಕ್ತಿಯ ಪ್ರಚಾರ ಮತ್ತು ವರ್ಚಸ್ಸಿಗೆ ಬಳಕೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎನ್ನುವುದು ನ್ಯಾಯಾಲಯದ ಇಂಗಿತವಾಗಿದೆ. ದುರಂತವೆಂದರೆ, ಅಧಿಕಾರಿಗಳು ಮಾತ್ರ ಸರ್ವೋಚ್ಛ ನ್ಯಾಯಾಲಯಗಳ ತೀರ್ಪಿನ ಬಗ್ಗೆ ಕನಿಷ್ಟ ಗೌರವ ತೋರದಿರುವ ವಿಚಿತ್ರ ಜಿಲ್ಲೆಯಲ್ಲಿದೆ.
ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಯಾವುದೇ ಕ್ಷೇತ್ರಕ್ಕೆ ಹೋದರೂ, ಈ ಹಿಂದಿನ ಮತ್ತು ಈಗಿನ ಶಾಸಕ, ಸಂಸದರು ಹಾಗೂ ಸ್ಥಳೀಯ ಮುಖಂಡರ ಭಾವಚಿತ್ರಗಳು ಕಾನೂನು ಬಾಹೀರವಾಗಿ ಸರ್ಕಾರಿ ಯೋಜನೆಗಳು ರಾಜಕೀಯ ಪ್ರಚಾರಕ್ಕೆ ಬಳಕೆಯಾಗುತ್ತಿವೆ. ಚುನಾವಣೆಗಳಲ್ಲಿ ಮಾತ್ರ ಈ ಭಾವಚಿತ್ರಗಳನ್ನು ತೆರವುಗೊಳಿಸುವ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳು ನೆನಪಿಲ್ಲವೆ? ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಾಗಿದೆ.
ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಶಾಸಕರು, ಸಂಸದರ ಭಾವಚಿತ್ರ ಮತ್ತು ಹೆಸರುಗಳು ಇರುವುದನ್ನು ತೆರವುಗೊಳಿಸಿ, ಸರ್ಕಾರದ ಯೋಜನೆಯನ್ನಾಗಿ ಪ್ರಕಟಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಸುಪ್ರೀಂ ಮತ್ತು ಹೈಕೋರ್ಟ್‌ಗಳಿಗೆ ಮಾನ್ಯತೆ ನೀಡದಿರುವುದು ವಿಚಿತ್ರವಾಗಿದೆ. ನ್ಯಾಯಾಲಯದ ಆದೇಶಕ್ಕೂ ಜಿಲ್ಲೆಯಲ್ಲಿ ಬೆಲೆ ಇಲ್ಲವೆ?. ಜಿಲ್ಲೆಯಲ್ಲಿರುವ ಸಾರ್ವಜನಿಕ ಹಿತಾಸಕ್ತಿ ಆಧಾರವಾಗಿ ನ್ಯಾಯಾಲಯದಲ್ಲಿ ದಾವೆ ಹೂಡುವ ಸಂಘ-ಸಂಸ್ಥೆಯ ಮುಖಂಡರು ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಆಯಾ ಜನಪ್ರತಿನಿಧಿಗಳ ಉದ್ರಿ ಪ್ರಚಾರದ ಕಡಿವಾಣ ಹಾಕಲು ನ್ಯಾಯಾಲಯಗಳಲ್ಲಿ ಇದನ್ನು ಪ್ರಶ್ನಿಸುವ ಮತ್ತು ಜಿಲ್ಲೆಯಲ್ಲಿ ಜಿಲ್ಲಾಡಳಿತ ಮತ್ತು ವಿವಿಧ ಸ್ಥಳೀಯ ಸಂಸ್ಥೆಗಳು ಯಾವ ರೀತಿ ಉನ್ನತ ನ್ಯಾಯಾಲಯಗಳ ಆದೇಶಗಳನ್ನು ಉಲ್ಲಂಘಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಿದ್ದಾರೆ ಎನ್ನುವುದನ್ನು ನ್ಯಾಯಾಲಯ ಗಮನಕ್ಕೆ ತರುವ ಮೂಲಕ ಇಲ್ಲಿಯ ಆಡಳಿತಕ್ಕೆ ಚುರುಕು ಮುಟ್ಟಿಸುವ ಕ್ರಮ ನಡೆಯುವುದೆ?.