ಸರ್ಕಾರದ ಹಂತದಲ್ಲಿ ಬಾಕಿ ಇರುವ ಪ್ರಸ್ತಾವನೆ ಬಗ್ಗೆ ವರದಿ ನೀಡಲು ಡಿ.ಸಿ. ಸೂಚನೆ

ಕಲಬುರಗಿ,ಮೇ.24: ಕಲಬುರಗಿ ಜಿಲ್ಲೆಯ ವಿವಿಧ ಇಲಾಖೆಗಳಿಂದ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸರ್ಕಾರದ ಹಂತದಲ್ಲಿ ಬಾಕಿ ಇರುವ ಪ್ರಸ್ತಾವನೆಗಳ ಕುರಿತ ಸಂಕ್ಷಿಪ್ತ ವರದಿ ಕೂಡಲೆ ಜಿಲ್ಲಾಡಳಿತಕ್ಕೆ ನೀಡುವಂತೆ ಡಿ.ಸಿ. ಯಶವಂತ ವಿ. ಗುರುಕರ್ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ತೊಗರಿ ನೆಟೆ ರೋಗಕ್ಕೆ ಪರಿಹಾರ, ಸಮಾಜ ಕಲ್ಯಾಣ ಇಲಾಖೆಯಿಂದ ಜಮೀನು ಮಂಜೂರಾತಿ, ಗಾಣಗಾಪೂರ ಕಾರಿಡಾರ್ ಅಭಿವೃದ್ಧಿ, ಚಂದ್ರಂಪಳ್ಳಿ ಟ್ರೀ ಪಾರ್ಕ್ ಯೋಜನೆ ಹೀಗೆ ಸರ್ಕಾರಕ್ಕೆ ಆಯಾ ಇಲಾಖೆಗಳಿಂದ ಸಲ್ಲಿಸಲಾದ ಪ್ರಸ್ತಾವನೆ ಪಟ್ಟಿಯನ್ನು ಇಂದೇ ಸಲ್ಲಿಸುವಂತೆ ಸೂಚಿಸಿದರು.

2019-20 ರಿಂದ 2021-22ರ ವರೆಗೆ ಅತಿವೃಷ್ಠಿ ಸಂದರ್ಭದಲ್ಲಿ ಲೋಕೋಪಯೋಗಿ, ಪಂಚಾಯತ್ ರಾಜ್ ಹಾಗೂ ಕೆ.ಆರ್.ಐ.ಡಿ.ಎಲ್. ಇಲಾಖೆಗಳಿಂದ ಕೈಗೊಳ್ಳಲಾದ ಎಲ್ಲಾ ರಸ್ತೆ, ಸೇತುವೆ, ಕಟ್ಟದ ಕಾಮಗಾರಿಗಳ ಸಮಗ್ರ ಮಾಹಿತಿ 3 ದಿನದೊಳಗೆ ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು. ಯಾವುದೇ ಕಾರಣಕ್ಕೂ ಈ ಕಾರ್ಯಗಳಿಗೆ ಅತಿವೃಷ್ಠಿ ನಿಧಿ ಮತ್ತು ಸಾಮಾನ್ಯ ನಿಧಿ ಎರಡನ್ನು ತೆಗೆದುಕೊಳ್ಳಬಾರದೆಂದು ತಿಳಿಸಿದ ಅವರು, ಇದನ್ನು ಉಲ್ಲಂಘಿಸಿದಲ್ಲಿ ಶಿಸ್ತಿನ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಹಂತದಲ್ಲಿ ಬ್ಯಾಕಲಾಗ್, ಅಂಗನವಾಡಿ ನೇಮಕಾತಿ ಪ್ರಕ್ರಿಯೆಗಳು ಬಾಕಿ ಇದ್ದಲ್ಲಿ ಕೂಡಲೆ ಪೂರ್ಣಗೊಳಿಸಬೇಕು. ಕಡತಗಳ ವಿಲೇವಾರಿ ಮಾಡುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ನೀಡಬೇಕೆಂದರು. ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.