ಸರ್ಕಾರದ ಸೌಲಭ್ಯ ಸದುಪಯೋಗಕ್ಕೆ ಕರೆ

ಕೋಲಾರ,sಸೆ,೧೨- ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶ್ರದ್ಧೆಯಿಂದ ಓದಿ ಸಾಧಕರಾಗಿ ಹೊರಹೊಮ್ಮಿ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಲಕ್ಷ್ಮಿ ಕರೆ ನೀಡಿದರು.
ಶಾಲೆಯ ಆವರಣದಲ್ಲಿ ಸರ್ಕಾರ ಒದಗಿಸಿರುವ ಶೂ ಸಾಕ್ಸ್‌ಗಳನ್ನು ಮಕ್ಕಳಿಗೆ ವಿತರಿಸಿದ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಸಿಗುತ್ತಿದೆ, ಖಾಸಗಿ ಶಾಲೆಗಳಿಗಿಂತ ಇಲ್ಲಿ ಉತ್ತಮ ಕಲಿಕೆ, ಸಂಸ್ಕಾರ ಕಲಿಸುವ ಶಿಕ್ಷಕರಿದ್ದಾರೆ ಎಂದರು.
ಸರ್ಕಾರ ಮಕ್ಕಳಿಗೆ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಪಠ್ಯಪುಸ್ತಕ ಶೂ,ಸಾಕ್ಸ್, ಸಮವಸ್ತ್ರ ಒದಗಿಸುತ್ತಿದೆ ಇದರ ಪ್ರಯೋಜನ ಪಡೆಯುವ ಮೂಲಕ ಸಾಧಕರಾಗಿ, ಗೈರಾಗದಿರಿ ಎಂದು ಕಿವಿಮಾತು ಹೇಳಿದರು.
ಅರಾಭಿಕೊತ್ತನೂರು ಶಾಲೆಯಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಸೌಲಭ್ಯಗಳಿವೆ, ಕಂಪ್ಯೂಟರ್ ಶಿಕ್ಷಣದ ಸೌಲಭ್ಯವಿದೆ, ನಾಲ್ಕು ಕೊಠಡಿಗಳಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯವಿದೆ, ವಿಜ್ಞಾನ ಪ್ರಯೋಗಾಲಯವಿದೆ ಈ ಎಲ್ಲವನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕಿ ಸಿದ್ದೇಶ್ವರಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಪ್ರತಿಷ್ಟಿತ ಕಂಪನಿಯ ಶೂಗಳನ್ನು ನೀಡಲಾಗಿದೆ, ಎಸ್‌ಡಿಎಂಸಿ, ಪೋಷಕರ ಸಮಿತಿ ಪರಿಶೀಲಿಸಿ ಒಪ್ಪಿಗೆ ಪಡೆದ ನಂತರವೇ ಶೂ ವಿತರಿಸಲು ಕ್ರಮವಹಿಸಲಾಗಿದೆ ಎಂದ ಅವರು, ಮುಖ್ಯಶಿಕ್ಷಕರ ವರ್ಗಾವಣೆ ಮತ್ತಿತರ ಕಾರಣಗಳಿಂದ ಶೂ ವಿತರಣೆಗೆ ತಡವಾಗಿದೆ ಎಂದು ಹೇಳಿದರು.
ಮಕ್ಕಳು ಶಾಲೆಗೆ ಗೈರಾಗದಿರಿ, ತರಗತಿ,ಶಾಲೆ ಆವರಣದಲ್ಲಿ ಸ್ವಚ್ಚತೆ ಕಾಪಾಡಿ ಎಂದ ಅವರು, ಈ ಬಾರಿಯೂ ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೆ ಉತ್ತಮ ಫಲಿತಾಂಶ ಸಿಗುವಂತೆ ಮಾಡಲು ಶಿಕ್ಷಕರು ಶ್ರಮಿಸುತ್ತಿದ್ದಾರೆ, ವಿದ್ಯಾರ್ಥಿಗಳನ್ನು ತಪ್ಪದೇ ಶಾಲೆಗೆ ಕಳುಹಿಸುವ ಮೂಲಕ ಎಸ್‌ಡಿಎಂಸಿ,ಪೋಷಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಎಸ್‌ಡಿಎಂಸಿ ಸದಸ್ಯ ರಾಘವೇಂದ್ರ, ಗುಣಮಟ್ಟದ ಶೂ ಸಾಕ್ಸ್ ವಿತರಣೆಗೆ ಕ್ರಮವಹಿಸಲಾಗಿದೆ, ಮಕ್ಕಳು ಸೌಲಭ್ಯಪಡೆಯುವುದು ಮಾತ್ರವಲ್ಲ ಓದಿನಲ್ಲಿ ನಿಮ್ಮ ಸಾಮರ್ಥ್ಯ ದೃಢಪಡಿಸಿ ಸಾರ್ಥಕತೆ ಮೆರೆಯಬೇಕು, ಪಠ್ಯದ ಜತೆಗೆ ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಾಧಕರಾಗಿ ಹೊರಹೊಮ್ಮಬೇಕೆಂದರು..
ಈ ಸಂದರ್ಭದಲ್ಲಿ ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ಶ್ವೇತಾ,ಸುಗಣಾ, ವೆಂಕಟರೆಡ್ಡಿ, ಫರೀದಾ, ಶ್ರೀನಿವಾಸಲು,ರಮಾದೇವಿ ಮತ್ತಿತರರಿದ್ದರು.