ಸರ್ಕಾರದ ಸೌಲಭ್ಯ ಸದುಪಯೋಗಕ್ಕೆ ಸಚಿವರ ಕರೆ

ಕುಂದಗೋಳ ಜು.26 : ಗ್ರಾಮೀಣ ಜನತೆ ತಾಲೂಕು ಕೇಂದ್ರಕ್ಕೆ ತೆರಳದೆ ತಮ್ಮ ಸ್ವಗ್ರಾಮದಲ್ಲೇ ಸರ್ಕಾರ ಇದೀಗ ಗ್ರಾಮ ಒನ್ ಸೌಲಭ್ಯವನ್ನು ಒದಗಿಸಿದ್ದು, ಜನತೆ ಈ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರಾಜ್ಯ ಗಣಿ-ಭೂವಿಜ್ಞಾನ ಹಾಗೂ ಮಹಿಳಾ-ಮಕ್ಕಳ ಕಲ್ಯಾಣ ಇಲಾಖಾ ಸಚಿವ ಹಾಲಪ್ಪ ಆಚಾರ ಕರೆ ನೀಡಿದರು.
ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಸೋಮವಾರ ನೂತನ ನಾಡಕಚೇರಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡುತ್ತ ಉತಾರ, ಜಾತಿ-ಆದಾಯ, ಪಡಿತರ ಚೀಟಿ, ಕಾರ್ಮಿಕ ಚೀಟಿ ಸೇರಿದಂತೆ ಹತ್ತು ಹಲವಾರು ಅರ್ಜಿಗಳನ್ನು ಆನ್‍ಲೈನ್ ಮೂಲಕ ನಿಮ್ಮ ಗ್ರಾಮದಲ್ಲಿನ ಗ್ರಾಮ ಒನ್ ಕಚೇರಿಯಲ್ಲಿ ಸಲ್ಲಿಸಿ, ಆಯಾ ಕಚೇರಿಗೆ ಅಲೆಯದೆ ಕಡಿಮೆ ಸಮಯದಲ್ಲಿ ನಿಮಗನುಕೂಲವಾಗುವ ಪ್ರಮಾಣ ಪತ್ರಗಳನ್ನು ಪಡೆಯಬಹುದಾಗಿದೆ. ಇದರಿಂದ ರೈತರಿಗೆ, ಮಹಿಳೆಯರಿಗೆ, ವಯೋವೃದ್ಧರಿಗೆ ಸಹಕಾರಿಯಾಗಲಿದ್ದು, ರೈತರಿಗಾಗಿ ಸರ್ಕಾರ ನೀಡಿದ ಅನೇಕ ಯೋಜನೆಗಳು ಸಾಕಾರಗೊಳ್ಳುತ್ತಿದ್ದು, ರಾಜ್ಯ ಹಾಗೂ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಮನೆಮನೆಗೆ ನೀರೊದಗಿಸಲು ಜೆಜೆಎಂ ಅನಿಷ್ಠಾನ, ಆಯುಷ್ಮಾನ್ ಭಾರತ, ಕೃಷಿ ವಿದ್ಯಾನಿಧಿಯೋಜನೆ ಸೇರಿದಂತೆ ಹಲವಾರು ಜನಪರ ಯೋಜನೆಗಳು ಅನುಷ್ಠಾನಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರಗಳು ಅಭಿವೃದ್ಧಿಗಾಗಿ ಸಾಕಷ್ಟು ಪ್ರಯತ್ನಿಸುತ್ತಿವೆ ಎಂದರು.
ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ ಜನತೆ ತಾವು ಪಡೆಯುವ ಪ್ರಮಾಣಪತ್ರಗಳಿಂದ ಆಶೋತ್ತರಗಳನ್ನು ಈಡೇರಿಸಿಕೋಳ್ಳಲು ಈ ನಾಡಕಚೇರಿ ಅನುಕೂಲಕರವಾಗಿದ್ದು, ತಹಸೀಲ್ದಾರ ಕಚೇರಿಯಲ್ಲಿ ದೊರೆಯುವ ಸಕಲ ಸೌಲಭ್ಯಗಳನ್ನು ಇಲ್ಲಿ ನೀಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ರಾಜ್ಯ ಕೃಷಿ ರಪ್ತು ನಿಗಮಾಧ್ಯಕ್ಷ ಎಸ್.ಐ ಚಿಕ್ಕನಗೌಡ್ರ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಎಂ.ಆರ್ ಪಾಟೀಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಇಓ ಸುರೇಶ ಇಟ್ನಾಳ್, ತಹಸೀಲ್ದಾರ ಅಶೋಕ ಶಿಗ್ಗಾವಿ, ಉಪತಹಸೀಲ್ದಾರ ರವೀಂದ್ರ ಗುಗ್ಗರಿ, ಆರ್.ಐ ಶಿವಾನಂದ ಕರಿಗಾರ ಹಾಗೂ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಸೇರಿದಂತೆ ಗ್ರಾಮದ ಅನೇಕ ಗಣ್ಯರಿದ್ದರು.