ಸರ್ಕಾರದ ಸೌಲಭ್ಯ ಪಡೆದು ಬೋವಿ ಸಮಾಜ ಮುಂದೆ ಬರಲಿ

 ದಾವಣಗೆರೆ. ಆ.೧: ರಾಜ್ಯದಲ್ಲಿ ಭೋವಿ ಸಮಾಜದ ಜನಸಂಖ್ಯೆ  ೪೦ ಲಕ್ಷ ಇದೆ. ನಮ್ಮ ಸಮಾಜದ ಮುಖ್ಯ ಕುಲಕಸುಬು ಕಲ್ಲು ಹೊಡೆಯುವುದಾಗಿದೆ. ಸರ್ಕಾರ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಆದ್ದರಿಂದ ಸಮಾಜ ಬಾಂಧವರು ಸರ್ಕಾರದ ಸೌಲಭ್ಯಗಳನ್ನು  ಸಮರ್ಪಕವಾಗಿ ಸದುಪಯೋಗ ಪಡೆಯಬೇಕು ಎಂದು ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಕರೆ ನೀಡಿದರು.ನಗರದ ಶಿವಯೋಗಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ದೇವರ 60ನೇ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಸರ್ಕಾರ ಬಜೆಟ್ ನಲ್ಲಿ ಮೆಗಾ ಹಾಸ್ಟೆಲ್ ಗಳನ್ನು ಮಂಜೂರು ಮಾಡಿದೆ. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಿವೆ ಇದನ್ನು ಬಳಕೆ ಮಾಡಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಬೇಕು. ಸರ್ಕಾರ ಮನೆ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ ಇದಲ್ಲದೇ ಹತ್ತುಹಲವಾರು ಯೋಜನೆಗಳಿವೆ ಹಾಗೂ ಬೋವಿ ಅಭಿವೃದ್ಧಿ ನಿಗಮದಲ್ಲಿ ಹಣಕಾಸಿನ ಕೊರತೆ ಇಲ್ಲ ಆದ್ದರಿಂದ ಸೌಲಭ್ಯ ಪಡೆದು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು ಉನ್ನತ ಶಿಕ್ಷಣ ಪಡೆಯುವಂತೆ ಮಾಡಬೇಕು ಎಂದರು.ಚಿತ್ರದುರ್ಗ ಭೋವಿ ಗುರುಪೀಠದ ಮುಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ನಮ್ಮಂತಹ ಚಿಕ್ಕ ಸಮುದಾಯಗಳ ಸಹಾಯ ಮಾಡುವುದು ತುಂಬಾ ಕಷ್ಟ. ಬೊಮ್ಮಾಯಿ ಅವರು ನೂತನ ಮುಖ್ಯಮಂತ್ರಿ ಅದಾಗ ನಮ್ಮ ಸಮುದಾಯದಕ್ಕೆ ಅನುದಾನ ಸಿಗುವುದು ಕಷ್ಟ ಆಗಲಿದೆ ಎಂದು ಕಾಗಿನೆಲೆ ಶ್ರೀಗಳ ಬಳಿ ಹೇಳಿಕೊಂಡಿದ್ದೆ‌ ಆದರೆ ತಾಯಿ ಹೃದಯದ ಬೊಮ್ಮಾಯಿ ಅವರು ನಮ್ಮ ಸಮುದಾಯ ಸೇರಿದಂತೆ ಸಣ್ಣ ಸಮಯದಾಯಗಳಾದ ಕುಂಬಾರ, ಹಡಪದ, ಮಡಿವಾಳ ಸೇರಿದಂತೆ ಯಾರಾದರೂ 120ಕೋಟಿ ಅನುದಾನ ಕೊಟ್ಟವರು ಸಿಎಂ ಬಸವರಾಜ್ ಬೊಮ್ಮಾಯಿ ಮಾತ್ರ. ನಾವು ಯಾವ ಮನವಿ ಕೊಡದೆ ಮಗುವಿನ ಅಳು, ನೋವನ್ನು ಅರಿಯುವಂತೆ ಈಗಿನ ಸಿಎಂ ನಮಗೆ ಎಲ್ಲವನ್ನೂ ನೀಡಲಿದ್ದಾರೆ ಎನ್ನವ ಭರವಸೆ ಇದೆ. ಅದಕ್ಕೆ ತಕ್ಕಂತೆ ಸ್ಪಂದನೆ ನೀಡಿದ್ದಾರೆ ಎಂದು ಹೇಳಿದರು.ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಮಾತನಾಡಿ, ಸರ್ಕಾರ ಅನೇಕ ಅಭಿವೃದ್ಧಿ ನಿಗಮಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದೆ. ಆದರೆ ಭೋವಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು  ನೇಮಕ ಮಾಡಿಲ್ಲ. ಇದರಿಂದ ನಿಗಮಕ್ಕೆ ಬರುತ್ತಿರುವ ಹಣವನ್ನು ಅಧಿಕಾರಿಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಿ, ಭೋವಿ ಜನಾಂಗದ ಕಟ್ಟಕಡೆಯ ವ್ಯಕ್ತಿಗೂ ನಿಗಮದ ಅನುಕೂಲ ತಲುಪಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.ದಲಿತ ಸಮುದಾಯದ ಅನುದಾನವನ್ನು ಡೈವರ್ಟ್ ಮಾಡಲು ಸಾಧ್ಯವಿಲ್ಲ. ಅದು ಕೊಟ್ಟು ಕಡೆಯ ವ್ಯಕ್ತಿಗೂ ತಲುಪಲು ಅಧಿಕಾರಿಗಳ ದುರುಪಯೋಗ ತಡೆಯಿರಿ. ಎಸ್ಸಿ ಎಸ್ಟಿ ಯ ಸಮಾಜ ಕಲ್ಯಾಣ ಇಲಾಖೆಯ ಅನುದಾನ ನಮ್ಮ ಸಮಾಜಕ್ಕೆ ತಲುಪಲಿ. ನಮ್ಮ ಸಮಾಜದ ಸಾಕಷ್ಟು ಸಮಸ್ಯೆಗಳಿದ್ದು, ಮುಖ್ಯ ಮಂತ್ರಿಗಳು ಶೀಘ್ರವೇ ಸಮಾಜದ ಮುಖಂಡರ ಸಭೆ ಕರೆಯಿರಿ. ಅಲ್ಲಿ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತೇವೆ ಎಂದು ಮನವಿ ಮಾಡಿದರು.ನಮ್ಮ ಸಮಾಜ ಸ್ವಾಭಿಮಾನದಿಂದ ಕುಲಕಸುಬಾದ ಕಲ್ಲು ಹೊಡೆಯುವ, ಮಣ್ಣು ಹೊರುವ ಕೆಲಸವನ್ನು ಮಾಡುತ್ತಾ ಬಂದಿದೆ. ಆದರೆ ಈಗ ಅದಕ್ಕೂ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಕಿರುಕುಳ ನಿಲ್ಲಿಸಿದರೆ ನಾವು ಯಾರಿಗೂ ಹೊರೆಯಾಗದೆ ಬದುಕುತ್ತೇವೆ. ಹಿಂದೆ ಯಡ್ಯೂರಪ್ಪ ಅವರು ಈ ಭೋವಿ ಸಮಾಜದ ಕುಲಕಸುಬು ಅವರಿಗೆ ಸೇರಬೇಕೆಂದು ಸಮಸ್ಯೆ ಎದುರಾದಾಗ ಪರಿಹರಿಸಿದ್ದರು. ಈಗ ಮತ್ತೆ ಆ ಸಮಸ್ಯೆ ಎದುರಾಗಿದ್ದು,  ಮುಖ್ಯ ಮಂತ್ರಿಗಳು ಪರಿಹರಿಸುವಂತೆ ಮನವಿ ಮಾಡಿದರು.