ಸರ್ಕಾರದ ಸೌಲಭ್ಯಗಳ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖ

ಸಂಜೆವಾಣಿ ನ್ಯೂಸ್
ಮೈಸೂರು,ಡಿ.8:- ಸರ್ಕಾರದ ಸೌಲಭ್ಯಗಳ ಮಾಹಿತಿಯನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಪೆÇ್ರ ಎನ್ ಕೆ ಲೋಕನಾಥ್ ಅವರು ತಿಳಿಸಿದರು.
ನಗರದ ಸಿದ್ದಾರ್ಥ ಹೋಟೆಲ್‍ನಲ್ಲಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಪತ್ರಕರ್ತರ ಸಂಘ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ಮೈಸೂರು ಜಿಲ್ಲಾ ಮಾದ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ವಾರ್ತಾಲಾಪ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಸಂವಹನ ಬಹಳ ಮುಖ್ಯ. ಸರ್ಕಾರದ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗೆ ತಲುಪಲು ಮಾದ್ಯಮಗಳ ಪಾತ್ರ ಬಹಳ ಮುಖ್ಯ. ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರದ ಸೌಲಭ್ಯಗಳ ಮಾಹಿತಿ ದೊರೆಯಬೇಕು. ಇಂತಹ ಮಾಹಿತಿ ನೀಡುವ ಕಾರ್ಯಕ್ರಮಗಳು ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ನಡೆಯಬೇಕು. ಪತ್ರಿಕೆಗಳು ಮಾಹಿತಿಗಳನ್ನು ನೀಡುವ ಕೊಂಡಿಗಳು ಆಗಿವೆ ಎಂದರು.
ಕೇಂದ್ರ ವಾರ್ತಾ ಶಾಖೆಯ ಹೆಚ್ಚುವರಿ ಮಹಾ ನಿರ್ದೇಶಕರಾದ ಎಸ್ ಜಿ ರವೀಂದ್ರ ಅವರು ಮಾತನಾಡಿ ಕೇಂದ್ರ ಸರ್ಕಾರವು ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರದಲ್ಲಿ 79 ಯೋಜನೆಗಳು ಇದ್ದು ಇವುಗಳನ್ನು ಪ್ರಚಾರ ಮಾಡಲು ರಾಜ್ಯದಲ್ಲಿ 49 ವಾಹನಗಳು ಸಂಚಾರ ಮಾಡುತ್ತಿವೆ. ಬುಡಕಟ್ಟು ಜನಾಂಗಗಳ ಏಳಿಗೆಗೆ ಏಕಲವ್ಯ ಶಾಲೆಗಳನ್ನು ತೆರೆದು ಶಿಕ್ಷಣ ನೀಡಲಾಗುತ್ತಿದೆ. ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ದೇಶದಾದ್ಯಂತ ನಡೆಯುತ್ತಿದೆ. ಡಿಸೆಂಬರ್ 09 ರಂದು ಮಾನ್ಯ ಪ್ರಧಾನ ಮಂತ್ರಿಗಳು ಕೋಲಾರ ಮತ್ತು ತುಮಕೂರಿನ ಜಿಲ್ಲೆಯ ಜನರೊಂದಿಗೆ ವರ್ಚುಯಲ್ ಸಭೆಯ ಮೂಲಕ ಸಂವಾದ ನಡೆಸುತ್ತಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕುಮಾರಸ್ವಾಮಿ ಅವರು ಮಾತನಾಡಿ ಕಳೆದ ಎರಡು ವರ್ಷಗಳ ಹಿಂದೆ ಬಂದಂತಹ ಕೋವಿಡ್‍ನ್ನು ಆರೋಗ್ಯ ಇಲಾಖೆ ಯಶಸ್ವಿಯಾಗಿ ಎದುರಿಸಿತು. ಪಲ್ಸ್ ಪೆÇೀಲಿಯೋ ಲಸಿಕೆಯನ್ನು ಯಶಸ್ವಿಯಾಗಿ ನೀಡಿ 2014 ರಲ್ಲಿ ಭಾರತವನ್ನು ಪೆÇೀಲಿಯೋ ಮುಕ್ತ ರಾಷ್ಟ್ರ ಎಂದು ಘೋಷಿಸಲಾಗಿದೆ. 2025 ಕ್ಕೆ ಕುಷ್ಟ ರೋಗ ಮುಕ್ತ ಮಾಡಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 20 ರಾಷ್ಟ್ರೀಯ ಯೋಜನೆಗಳನ್ನು ಆರೋಗ್ಯ ಇಲಾಖೆಯಿಂದ ಕಾರ್ಯ ರೂಪಕ್ಕೆ ತರಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 1800 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತೆಯರ ಮೂಲಕ ಆರೋಗ್ಯ ಇಲಾಖೆಗೆ ಸಂಬoಧಿಸಿದ ಮಾಹಿತಿ ಹಾಗೂ ಸೇವೆಯನ್ನು ಮನೆ ಮನೆಗೆ ತೆರಳಿ ನೀಡುತ್ತಿದ್ದಾರೆ. ಅಯುಷ್ಮನ್ ಭಾರತ್ ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಾನಸ ಗಂಗೋತ್ರಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಸ್ವಪ್ನ ಅವರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವು ಜನರಿಗೆ ತಲುಪಬೇಕು. ಸೌಲಭ್ಯಗಳನ್ನು ಪಡೆದ ಜನರ ಅಭಿಪ್ರಾಯಗಳನ್ನು ಮಾಧ್ಯಮಗಳು ಪ್ರಚಾರ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್ ಟಿ ರವಿಕುಮಾರ್ ಅವರು ಮಾತನಾಡಿ ಪತ್ರಕರ್ತರು ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ. ಮುದ್ರಣ ಮಾಧ್ಯಮಗಳು ದಾಖಲಾತಿಯಾಗಿ ಉಳಿಯುತ್ತವೆ. ಮಾಧ್ಯಮಗಳು ಜನರು ಹಾಗೂ ಸರ್ಕಾರದ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಮಾಧ್ಯಮಗಳ ವರದಿಗಳಲ್ಲಿ ಮಾನವೀಯತೆಗಳನ್ನು ಒಳಗೊಂಡಿರಬೇಕು ಎಂದು ಮಾಹಿತಿ ನೀಡಿದರು.
ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನ ಕುಮಾರ್ ಅವರು ಮಾತನಾಡಿ ಪ್ರಧಾನಮಂತ್ರಿಗಳ ಜನಧನ್ ಯೋಜನೆಯ ಜಿರೋ ಬ್ಯಾಲೆನ್ಸ್ ಬ್ಯಾಂಕ್ ಖಾತೆ ಹೊಂದಿದ್ದು, ಸಹಜ ಸಾವು ಉಂಟಾದರೆ 30 ಸಾವಿರ, ಅಪಘಾತದ ಸಾವು ಆದರೆ 1 ಲಕ್ಷ ವಿಮೆ ದೊರೆಯುತ್ತದೆ. ಈ ಬಗ್ಗೆ ಮಾಹಿತಿ ನೀಡಿ ಸೌಲಭ್ಯ ದೊರೆಯುವಂತೆ ಮಾಡಿದ್ದು ಮಾಧ್ಯಮಗಳು ಎಂದು ತಿಳಿಸಿದರು.
ಬಳಿಕ ಆರಂಭವಾದ ಕಾರ್ಯಾಗಾರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಾದ ಉಜ್ವಲ, ಪ್ರಧಾನ ಮಂತ್ರಿ ಸ್ವಾನಿಧಿ, ಜನಧನ್, ಮುದ್ರಾ, ಆಯುಷ್ಮಾನ್ ಭಾರತ, ವಿಶ್ವಕರ್ಮ ಯೋಜನೆ, ಸಿಕಲ್ ಸೆಲ್ ಅನಿಮಿಯಾ, ಸ್ಟಾಂಡ್ ಅಪ್ ಇಂಡಿಯಾ, ವಿಕಸಿತ ಭಾರತ ಸಂಕಲ್ಪ ಯಾತ್ರೆ, ಕಿಸಾನ್ ಕ್ರೆಡಿಟ್ ಕಾರ್ಡ್ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾತನಾಡಿದರು. ಅರೋಗ್ಯ ಇಲಾಖೆಯ ಡಾ ಬೃಂದಾ ಬಿ, ಡಾ ಮೊಹಮ್ಮದ್ ಶಿರಾಜ್ ಅಹ್ಮದ್, ಡಾ ಮಹದೇವ್ ಪ್ರಸಾದ್, ಬ್ಯಾಂಕಿಂಗ್ ಕ್ಷೇತ್ರದ ಡಿ ಟಿ ವೆಂಕಟೇಶ್, ಕೆ ವೇಣುಗೋಪಾಲ್ ರಾವ್, ಶಂಕರ್ ನಾರಾಯಣ್, ಸುಷ್ಮಾ ಕೆ ಎನ್, ಇಂಡಿಯನ್ ಆಯಿಲ್ ಯಿಂದ ಹರ್ಷ ಎಚ್ ಎನ್ ಯೋಜನೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ನಾಗೇಶ್ ವಿ ಎನ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಉಪ ನಿರ್ದೇಶಕರಾದ ಎಸ್ ಪ್ರಕಾಶ್, ಕೇಂದ್ರ ಸಂವಹನ ಇಲಾಖೆಯ ಶ್ರುತಿ ಎಸ್ ಟಿ, ದರ್ಶನ್ ಪಿ ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು.