ಸರ್ಕಾರದ ಸೌಲಭ್ಯಗಳನ್ನು ಪಡೆದು ಏಳಿಗೆಯತ್ತ ಮುಖ ಮಾಡಿ: ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್

ಸಂಜೆವಾಣಿ ವಾರ್ತೆದಾವಣಗೆರೆ; ಸೆ.೧೯: ವಿಶ್ವಕರ್ಮ ಸಮುದಾಯ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದು ಏಳಿಗೆಯತ್ತ ಮುಖ ಮಾಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜ(ರಿ) ಇವರ ಸಹಯೋಗದೊಂದಿಗೆ ನಗರದ ಶ್ರೀ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ನಡೆದ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬಡ ಜನರಿಗೆ ಸರ್ಕಾರವು 5 ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಈಗಾಗಲೇ 4 ಗ್ಯಾರಂಟಿಗಳು ಕಾರ್ಯಗತಗೊಂಡಿವೆ. ಜನರಿಗೆ 5ಕೆ.ಜಿ ಅಕ್ಕಿ ಬದಲಾಗಿ 10ಕೆ.ಜಿ ನೀಡಲಾಗುತ್ತದೆ. 200 ಯುನಿಟ್‍ಗಳಷ್ಟು ವಿದ್ಯುತ್ ಉಚಿತವಾಗಿ ನೀಡುತ್ತಿದೆ. ಮತ್ತು ಮನೆಯ ಯಜಮಾನಿಗೆ ಕುಟುಂಬದ ನಿರ್ವಹಣೆಗೆ ತಿಂಗಳಿಗೆ ರೂ.2000 ಗಳನ್ನು ನೀಡಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಮಾದರಿಯಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 3 ಲಕ್ಷದ 40 ಸಾವಿರ ಮಹಿಳೆಯರು ನೊಂದಾಹಿಸಿದ್ದು, ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ, ಮಾಸಿಕ 2000 ಪಾವತಿಸಲಾಗುತ್ತದೆ.  ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರಿ ಸಾರಿಗೆಯಲ್ಲಿ ಉಚಿತವಾಗಿ ಪ್ರಯಣಿಸಲು ಅನುಕೂಲ ಮಾಡಿಕೊಡಲಾಗಿದೆ. ಜನರು ನಮ್ಮನ್ನು ಕೇವಲ ಹೊಗಳುವುದಲ್ಲದೇ ಸಲಹೆ, ಸೂಚನೆಗಳನ್ನು ನೀಡಬೇಕು ಎಂದರು.ಜಿಲ್ಲೆಯಲ್ಲಿ ವಿಶ್ವಕರ್ಮ ಸಮುದಾಯದ ಯಾವುದೇ ಕುಂದು ಕೊರತೆಗಳಿದ್ದಲ್ಲಿ ಮನವಿ ಮಾಡುವ ಮೂಲಕ ಸರ್ಕಾರದ ವತಿಯಿಂದ ಪರಿಹರಿಸಿಕೊಳ್ಳಬೇಕು, ಜನರಿಗೆ ಮೂಲಭೂತವಾಗಿ ವಸತಿ, ಆರೋಗ್ಯ, ವಿದ್ಯಾಭ್ಯಾಸ ಬೇಕಾಗಿದೆ. ಅದನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.