ಸರ್ಕಾರದ ಸೌಲಭ್ಯಗಳನ್ನು ಪಡೆದು ಸ್ವಾವಲಂಬಿಗಳಾಗಿರಿ : ವೈ.ಎಂ. ಸತೀಶ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ. 27: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಮೂಲಕ ವಿಕಲಚೇತನರು ಸ್ವಾವಲಂಬನೆಯ ಬದುಕನ್ನು ರೂಪಿಸಿಕೊಂಡು ಆದರ್ಶವಾಗಿ ಜೀವನ ನಡೆಸಬೇಕೆಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಕರೆ ನೀಡಿದ್ದಾರೆ.
ಜಿಲ್ಲಾ ಅಂಗವಿಕಲರ ಕಲ್ಯಾಣಭಿವೃದ್ಧಿ ಇಲಾಖೆಯು ಅರ್ಹರಿಗೆ ನೀಡಿರುವ ತ್ರಿಚಕ್ರ ವಾಹನಗಳನ್ನು ಇಂದು ನಗರದಲ್ಲಿ ವಿತರಣೆ ಮಾಡಿ ಮಾತನಾಡಿದ ಅವರು, ವಿಕಲಚೇತನರು ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದ ಅನೇಕರು ಸ್ವಾವಲಂಭನೆಯ ಜೀವನ ನಡೆಸುತ್ತಿದ್ದು, ಅನೇಕರು ಸಾಧನೆಗಳ ಮೂಲಕ ಸಮಾಜದಲ್ಲಿ ಗಣ್ಯರಾಗಿದ್ದಾರೆ ಎಂದು ಹೇಳಿದರು.
ವಿಕಲಚೇತನರ ಅನೇಕ ಸಾಧನೆಗಳು ಸಾಮಾನ್ಯರಿಗೂ ಮಾದರಿಯಾಗಿವೆ. ವಿಕಲಚೇತನರು ಕೀಳರಿಮೆಯನ್ನು ಬಿಟ್ಟು ಸ್ವಾಭಿಮಾನ, ಸ್ವಾವಲಂಭನೆ ಮತ್ತು ಆದರ್ಶ ಬದುಕನ್ನು ನಡೆಸುವ ಛಲವನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಸಾಧನೆಯ ಹಾದಿಯಲ್ಲಿ ಹೆಜ್ಜೆಗಳನ್ನು ಹಾಕಿದಂತೆಯೇ ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಎಚ್. ಗೋವಿಂದಪ್ಪ ಅವರು ಮಾತನಾಡಿ, ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರ 2022-23ರ ಸಾಲಿನ 5 ಲಕ್ಷ ರೂಪಾಯಿ ಅನುದಾನದ ಅಡಿಯಲ್ಲಿ ಕಂಪ್ಲಿ ಸಮೀಪದ ದೇವಸಮುದ್ರದ ಆನಂದಗಡಿ, ರಾರಾವಿಯ ಸಣ್ಣ ಬೀರಪ್ಪ, ತೆಕ್ಕಲಕೋಟೆಯ ಎಚ್. ವೀರೇಶ್, ಸಂಡೂರು ತಾಲೂಕಿನ ವಿ. ಗೊಲ್ಲರಹಟ್ಟಿಯ ಎಸ್. ಮಲ್ಲಮ್ಮ ಮತ್ತು ಕೋಳೂರು ಗ್ರಾಮದ ವನ್ನೂರಸ್ವಾಮಿ ಅವರಿಗೆ ತ್ರಿಚಕ್ರ ವಾಹನವನ್ನು ನೀಡಲಾಗಿದೆ. ಫಲಾನುಭವಿಗಳು ಸರ್ಕಾರದ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.