ಸರ್ಕಾರದ ಸಾಧನೆ ಸಾಕಷ್ಟಾದರೂ ದೇಶದ ಸಾಧನೆಗೆ ಕೈಜೋಡಿಸಬೇಕು: ವಡಗಾಂವ

ಆಳಂದ:ಮಾ.14: ಕೇಂದ್ರ ಮತ್ತು ರಾಜ್ಯ ಸರ್ಕಾರ ತನ್ನ ಯೋಜನೆಗಳ ಮೂಲಕ ಎಲ್ಲ ವರ್ಗದವರಿಗೆ ಹಾಗೂ ಬಡವರಿಗೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯಗಳು ತಲುಪಿಸಲು ಸಾಕಷ್ಟು ಪ್ರಯತ್ನಿಸುತ್ತ್ತಿದೆ, ಆದರೆ ಇದಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಗುರಿಸಾಧಿಸಲು ಅನುಷ್ಠಾನದ ಜವಾಬ್ದಾರಿಯುತರೊಂದಿಗೆ ಪ್ರತಿಯೊಬ್ಬ ಪ್ರಜೆಯೂ ಸ್ಥಳೀಯ ಮಟ್ಟದಲ್ಲಿ ಸೇವಾಭಾವದೊಂದಿಗೆ ಕೈಜೋಡಿಸಬೇಕಿದೆ ಎಂದು ಪತ್ರಕರ್ತ ಮಹಾದೇವ ವಡಗಾಂವ ಅವರು ಅಭಿಪ್ರಾಯ ಪಟ್ಟರು.

ಪಟ್ಟಣದ ಗುರುಭವನದಲ್ಲಿ ಕೇಂದ್ರ ಸಂವಹನ ಇಲಾಖೆ ಕಲಬುರಗಿ, ತಾಲೂಕು ಪಂಚಾಯತ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ರಾಜ್ಯ ಸರ್ಕಾರಿ ವಿವಿಧ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡ ಕೇಂದ್ರ ಸರ್ಕಾರದ 8ವರ್ಷಗಳ ಸಾಧನೆ, ಗರಿಬ ಕಲ್ಯಾಣ ಯೋಜನೆ, ಸ್ವಾತಂತ್ರ್ಯ ಅಮೃತ ಮಹೋತ್ಸವ, ಜಿ.20 ಶೃಂಗಸಭೆ ಪ್ರಧಾನಮಂತ್ರಿ ಮಿಷನ್ 2047, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಐದು ದಿನಗಳ ಕಾಲ ನಡೆದ ವಿಶೇಷ ಛಾಯಾ ಚಿತ್ರಪ್ರದರ್ಶನ ಸಮಾರೋಪ ಸಮಾರಂಭಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಸರ್ಕಾರದ ಸಾಧನೆ ಸಾಕಷ್ಟಾಗಿದ್ದರು ಇನ್ನೂ ದೇಶದ ಸಾಧನೆಗೆ ಪೂರಕವಾಗಿ ಕೃಷಿಕರಿಗೆ ಸೂಕ್ತ ಬೆಂಬಲ ಬೆಲೆ, ನೀರಾವರಿಗೆ ಅನುಕೂಲ, ಪಂಪಸೆಟ್‍ಗೆ ಸಮರ್ಪಕ ವಿದ್ಯುತ್, ನಿರುದ್ಯೋಗಿಗಳಿಗೆ ಮತ್ತು ವಿದ್ಯಾವಂತರಿಗೆ ಸಮಾರೋಪಾದಿಯಲ್ಲಿ ಉದ್ಯೋಗ ನೀಡುವ ಕಾರ್ಯವನ್ನು ನಡೆದರೆ ಮಾತ್ರ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗೆ ಅರ್ಥ ಕಲ್ಪಿಸಲು ಸಾಧ್ಯವಿದೆ ಎಂದರು.

ಪಿಎಂ ಕಿಸಾನ ಸಮ್ಮಾನ, ಆಯುಷ್ಮಾನ ಭಾರತ, ಆರೋಗ್ಯ ಕರ್ನಾಟಕ ಹಾಗೂ ಸಾಮಾಜಿಕ ಭದ್ರತಾ ಯೋಜನೆ, ಒಳಗೊಂಡು ಮಕ್ಕಳ ಶೈಕ್ಷಣಿಕ ಸೌಲಭ್ಯಗಳು ದೊರೆಯುತ್ತಿವೆ. ಸಿಕ್ಕಷ್ಟು ಸೌಲಭ್ಯಗಳಾದರು ಪಡೆಯಲು ಹೇಗೆ ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ವಿದ್ಯಾವಂತರು ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದರು.

ವಿಜ್ಞಾನ, ತಂತ್ರಜ್ಞಾನ, ಕೃಷಿ, ಕೈಗಾರಿಕೆ ಉದ್ಯೋಗ ಆರ್ಥಿಕವಾಗಿ ವಿಶ್ವಮಟ್ಟದಲ್ಲಿ ಭಾರತ ಗುರಿಸಾಧಿಸುವಂತಾಗಲು ವಿದ್ಯಾವಂತರ ಬಹುಪಾಲು ಅವಲಂಬಿತವಾಗಿದೆ. ಇದಕ್ಕೆ ಸಿಕ್ಕ ಸರ್ಕಾರಿ ಸೌಲಭ್ಯಗಳೊಂದಿಗೆ ನಮ್ಮ ಸಾಧನೆಗಳು ಸಮಾಜ ಮತ್ತು ದೇಶಕ್ಕೆ ಕೊಡುವಂತಾಗಲು ಪಣತೊಡಬೇಕು ಎಂದು ಹೇಳಿದರು.

ಶಿಶು ಅಭಿವೃದ್ಧಿ ಅಧಿಕಾರಿ ಶಿವಮೂರ್ತಿ ಕುಂಬಾರ ತಮ್ಮ ಇಲಾಖೆ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ದೈಹಿಕ ಶಿಕ್ಷಣದ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ಉಪನ್ಯಾಸಕರಾಗಿ ಪಾಲ್ಗೊಂಡಿದ್ದ ಹಿರಿಯ ಎಸ್.ಬಿ. ಪಾಟೀಲ ಮಾತನಾಡಿದರು.

ತಾಪಂ ಇಒ ಚಂದ್ರಮೌಳಿ, ಕ್ಷೇತ್ರ ಪ್ರಚಾರ ಅಧಿಕಾರಿ ನಾಗಪ್ಪ ಅಂಬಾಗೊಳ. ಸಂಜುಕುಮಾರ ಸಂಗೋಳಗಿಕರ್, ತಾಪಂನ ವಿನೋಧ, ವೈಜನಾಥ ಕೋರೆ, ಸಿಪಿಎಸ್ ಶಾಲೆ ಎಚ್‍ಎಂ ಅಪ್ಸಾನಾ ಬೇಗಂ, ಅಜೀಂ ಪ್ರೇಮಜಿಯ ಶಿವಾನಂದ ಮತ್ತಿತರು ಉಪಸ್ಥಿತರಿದ್ದರು.

ವಿಶ್ವಜೋತಿ ಕಲಾಬಳಗದ ಸಂಸ್ಥೆಯ ಕಾಶಿನಾಥ ಬಿರಾದಾರ, ಸುಭಾಷ ಎನ್. ಮೋಘಾ ನೇತೃತ್ವದಲ್ಲಿ ಸಾಂಸ್ಕøತಿಕ ಮತ್ತು ಸಂಗೀತ ಕಾರ್ಯಕ್ರಮ ಗಮನ ಸೆಳೆದವು. ಆಕಾಶವಾಣಿ ಮತ್ತು ದೂರದರ್ಶನ ಹಿರಿಯ ಕಲಾವಿದ ದತ್ತರಾಜ ಕಲಶೆಟ್ಟಿ ದೇಶಭಕ್ತಿ ಗೀತೆ ಹಾಡಿ ಗಮನ ಸೆಳೆದರು. ಸಾಂಸ್ಕøತಿ ಚಟುವಟಿಕೆ ಕೈಗೊಂಡ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಪ್ರಮಾಣ ಪತ್ರ ನೀಡಲಾಯಿತು.

ಐದು ದಿನಗಳ ಕಾಲ ನಡೆದ ವಿವಿಧ ಕಾರ್ಯಕ್ರಮ ಹಾಗೂ ಛಾಯಾ ಚಿತ್ರ ಪ್ರದರ್ಶನವನ್ನು ಯೋಜನೆಗಳ ಮತ್ತು ದೇಶ ಸಾಧನೆಯ ಉಪನ್ಯಾಸದಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ವೀಕ್ಷಿಸಿ ಮಾಹಿತಿ ಆಲಿಸಿದರು.