ಸರ್ಕಾರದ ಸಾಧನೆಗಳ ಜನೋತ್ಸವ- ಪೂರ್ವಭಾವಿ ಸಭೆ

ಕೋಲಾರ, ಆ. ೨೯- ಬಿಜೆಪಿ ಸರ್ಕಾರದ ಸಾಧನೆಗಳ ಜನೋತ್ಸವ ಕಾರ್ಯಕ್ರಮ ಸೆ.೮ ರಂದು ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದೆ. ಕೋಲಾರ ವಿಧಾನಸಭಾ ಕ್ಷೇತ್ರದಿಂದ ೨೦೦ ಬಸ್ಸುಗಳಲ್ಲಿ ಕಾರ್ಯಕರ್ತರು ಹೊರಡಲಿದ್ದು, ಕೋಲಾರದ ಬಿಜೆಪಿಯ ಶಕ್ತಿ ಪ್ರದರ್ಶನವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ತಿಳಿಸಿದರು.
ನಗರದ ಹಾಲಿಸ್ಟಾರ್ ಭವನದಲ್ಲಿ ಭಾನುವಾರ ಜಿಲ್ಲಾ ಬಿಜೆಪಿ ಪಕ್ಷ ಆಯೋಜಿಸಿದ್ದ ಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ತಿಂಗಳು ೨೮ರಂದು ಆಯೋಜಿಸಿದ್ದ ಸಭೆಯನ್ನು ಬಿಜೆಪಿ ಕಾರ್ಯಕರ್ತನ ಕೊಲೆ ಹಾಗೂ ಇತರೆ ಕಹಿ ಘಟನೆಗಳಿಂದಾಗಿ ಮುಂದೂಡಲಾಗಿತ್ತು ಎಂದರು.
ರಾಜ್ಯದಲ್ಲಿ ಮುಖ್ಯ ಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರ ೨ ವರ್ಷದ ಆಡಳಿತ ನಂತರದಲ್ಲಿ ಬಸವರಾಜ ಬೊಮ್ಮಾಯಿ ಅವರ ೧ ವರ್ಷದ ಆಡಳಿತದಲ್ಲಿನ ವಿವಿಧ ಯೋಜನೆಗಳು ಯಶ್ವಸ್ಸಿಯಾಗಿರುವ ಸಾಧನೆಯ ದಿಸೆಯಲ್ಲಿ ಜನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹೊರತುಪಡಿಸಿ ಯಾರೂ ಗೆಲ್ಲಲು ಸಾಧ್ಯವಿಲ್ಲ. ಇತರೆ ಪಕ್ಷಗಳು ಹೊರಗಿನವರನ್ನು ಕರೆ ತಂದು ಗೆಲ್ಲುವ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದರು.
ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಜನಪರ ಕಾರ್ಯ ಮಾಡಲಿಲ್ಲ, ಇವರ ನೀತಿಯಿಂದ ನೊಂದು ನಾವು ೧೭ ಮಂದಿ ಹೊರ ಬಂದಿದ್ದಾಗಿ ತಿಳಿಸಿದ ಅವರು, ಬಿಜೆಪಿಯಲ್ಲಿ ಉತ್ತಮ ಸ್ಥಾನಮಾನ ಸಿಕ್ಕಿದ್ದರಿಂದಾಗಿ ಕ್ಷೇತ್ರ ಅಭಿವೃದ್ದಿಯಾಗಿದೆ ಎಂದರು.
ಮಾಜಿ ಸಚಿವ ವರ್ತೂರು ಪ್ರಕಾಶ್, ಕಾರ್ಯಕ್ರಮಕ್ಕೆ ೨೦೦ ಗ್ರಾಮಗಳಿಂದ ಪ್ರತಿ ಗ್ರಾಮದಲ್ಲಿ ೧೦೦ ಮಂದಿಯಂತೆ ಕರೆ ತರಲು ಸುಮಾರು ೧೦ ಸಾವಿರ ಮಂದಿಯನ್ನು ೧೭೦ ಬಸ್‌ಗಳಲ್ಲಿ ದೊಡ್ಡಬಳ್ಳಾಪುರಕ್ಕೆ ಕರೆದು ಕೊಂಡು ಹೋಗಲು ಸಿದ್ದತೆ ನಡೆಸಲಾಗಿತ್ತು ಎಂದರು.
ಅದರೆ ಬಿಜೆಪಿ ಕಾರ್ಯಕರ್ತನ ಹತ್ಯೆ ಮತ್ತು ಅಹಿತಕರ ಘಟನೆಗಳ ಹಿನ್ನಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಯಿತು. ಈಗ ಸಚಿವ ಮುನಿರತ್ನ ಮತ್ತು ಸಂಸದ ಮುನಿಸ್ವಾಮಿ ಅವರು ೨೦೦ ಬಸ್ ಮಾಡಲು ಸೂಚಿಸಿದ್ದಾರೆ. ಇದರ ಜತೆಗೆ ಸುಮಾರು ೫೦ ಖಾಸಗಿ ವಾಹನಗಳಲ್ಲಿ ಮುಖಂಡರು, ಅಭಿಮಾನಿಗಳು ದೊಡ್ಡಬಳ್ಳಾಪುರ ಕಾರ್ಯಕ್ರಮಕ್ಕೆ ಕರೆ ತರುವುದಾಗಿ ಘೋಷಿಸಿದರು.
ರಾಜ್ಯ ಬಿಜೆಪಿ ಪಕ್ಷದ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಪ್ರಸ್ತಾವಿಕ ನುಡಿಗಳಾಡಿ ಬಿಜೆಪಿ ಪಕ್ಷದ ಯೋಜನೆಗಳು ಮತ್ತು ಸಾಧನೆಗಳನ್ನು ವಿವರಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್. ವೇಣುಗೋಪಾಲ್ ಮಾತನಾಡಿದರು.
ವೇದಿಕೆಯಲ್ಲಿ ಮಾಜಿ ಶಾಸಕ ವೈ. ಸಂಪಂಗಿ, ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕಾಂತರಾಜ್, ಜಿಲ್ಲಾ ಪ್ರಭಾರಿ ಜಯಚಂದ್ರರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ಕೃಷ್ಣಮೂರ್ತಿ, ಕೊಡಾ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಯುವ ಮೋರ್ಚಾ ಬಾಲಾಜಿ, ಜಿ.ಪಂ. ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಮಾಜಿ ಸದಸ್ಯರಾದ ಮಹೇಶ್. ಅರುಣ್ ಪ್ರಸಾದ್, ಆಶ್ವಿನಿ, ರೂಪ ಮಂಜುನಾಥ್,ಎಸ್.ಬಿ.ಮುನಿವೆಂಕಟಪ್ಪ, ಮುಖಂಡರಾದ ಸಿ.ಡಿ.ರಾಮಚಂದ್ರ, ತಿಮ್ಮರಾಯಪ್ಪ, ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್, ಓಹೀಲೇಶ್ ಮುಂತಾದವರು ಉಪಸ್ಥಿತರಿದ್ದರು.