ಸರ್ಕಾರದ ಸವಲತ್ತುಗಳನ್ನು ಅರ್ಹರಿಗೆ ತಲುಪಿಸಿ: ಡಾ: ಸುಶೀಲಾ

ಗದಗ, ಜು. 23: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಹಾಗೂ ಅವರ ಕುಟುಂಬ ಸದಸ್ಯರ ಆರೋಗ್ಯ ಸಂರಕ್ಷಣೆ ಕುರಿತು ಸಂಬಂಧಿತ ಇಲಾಖಾಧಿಕಾರಿಗಳು ಕ್ರಮ ವಹಿಸಬೇಕು. ಹಾಗೂ ಪೌರಕಾರ್ಮಿಕರಿಗೆ ಇರುವ ಸರ್ಕಾರದ ಸವಲತ್ತುಗಳನ್ನು ಅರ್ಹರಿಗೆ ತಲುಪಸಬೇಕು ಎಂದು ಪ್ರಭಾರಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರು ಜಿಲ್ಲೆಗೆ ಭೇಟಿ ನೀಡುವ ಹಿನ್ನಲೆಯಲ್ಲಿ ಶುಕ್ರವಾರ ಸಾಯಂಕಾಲ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರಿಗೆ ನಿಯಮಿತವಾಗಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ಅವರ ಆರೋಗ್ಯ ಸುಧಾರಣೆಗೆ ಮುಂದಾಗಬೇಕು. ಜೊತೆಗೆ ಕಾರ್ಯನಿರ್ವಹಿಸಿದ ಪೌರಕಾರ್ಮಿಕರಿಗೆ ಸರಿಯಾಗಿ ವೇತನ ಮತ್ತು ಭತ್ಯೆಗಳು ಪಾವತಿಯಾದ ಬಗ್ಗೆ ನಿಗಾವಹಿಸುವಂತೆ ಸೂಚಿಸಿದರು.
ಪೌರಕಾರ್ಮಿಕರು ಕಾರ್ಯನಿರ್ವಹಿಸಲು ಉತ್ತಮ ಗುಣಮಟ್ಟದ ಅಗತ್ಯದ ಸುರಕ್ಷತಾ ಪರಿಕರಗಳಾದ ಹ್ಯಾಂಡಗ್ಲೌಸ್, ಸಮವಸ್ತ್ರ, ಶೂಗಳನ್ನು ನಿಯಮಿತವಾಗಿ ವಿತರಿಸಬೇಕು. ವಿತರಿಸಿದ ಪರಿಕರಗಳನ್ನು ದೈನಂದಿನ ಕಾರ್ಯದ ವೇಳೆ ಧರಿಸಿ ಕಾರ್ಯನಿರ್ವಹಿಸುವದನ್ನು ಖಚಿಪಡಿಸಕೊಳ್ಳಬೇಕು. ಸುರಕ್ಷತಾ ಕ್ರಮಗಳ ಬಳಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಪೌರಕಾರ್ಮಿಕರಿಗೆ ಮನವರಿಕೆ ಮಾಡಿಕೊಡುವ ಕಾರ್ಯವನ್ನು ಇಲಾಖಾಧಿಕಾರಿಗಳು ನಿರ್ವಹಿಸಬೇಕೆಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ.ಶಿವಣ್ಣ ಕೋಟೆ ಅವರು ಗದಗ ಜಿಲ್ಲೆಗೆ ಜುಲೈ 25ರ ಸೋಮವಾರ ಆಗಮಿಸಿ ಸಂಜೆ ನಾಲ್ಕು ಗಂಟೆಗೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಸ್ವಚ್ಛತಾ ಕಾರ್ಮಿಕರು, ಪೌರಕಾರ್ಮಿಕರು ಹಾಗೂ ಗುರುತಿಸಲ್ಪಟ್ಟ ಮ್ಯಾನುಯಲ್ ಸ್ಕ್ಯಾವೆಂಜರಗಳು ಮತ್ತು ಮುಖಂಡರುಗಳ ಜೊತೆ ಕುಂದುಕೊರತೆಗಳ ಕುರಿತು ನೇರ ಸಂವಾದ ಜರುಗಿಸುವರು. ಜುಲಯ 26ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಂ.ಎಸ್. ಕಾಯ್ದೆ ಮತ್ತು ನಿಯಮಗಳು 2013ರ ಕುರಿತು ತರಬೇತಿ 11 ಗಂಟೆಗೆ ಆಯೋಗದ ಅಧ್ಯಕ್ಷರಿಂದ ಪೌರಕಾರ್ಮಿಕರ ಕುಂದುಕೊರತೆಗಳ ಬಗ್ಗೆ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ಜರುಗಲಿದೆ. ಸಭೆಗೆ ಎಲ್ಲ ಅಧಿಕಾರಿಗಳು ಸೂಕ್ತ ವರದಿಯೊಂದಿಗೆ ಹಾಜರಾಗುವಂತೆ ಕೋರಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಜಿ.ಪಂ. ಉಪಕಾರ್ಯದರ್ಶಿ ಬಸವರಾಜ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಆಯಾ ತಾಲೂಕುಗಳ ತಹಶೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಜರಿದ್ದರು.