ಸರ್ಕಾರದ ಶುಚಿ ಯೋಜನೆಯನ್ನು ಮುಂದುವರಿಸಿ-ಆಶಾಲತಾ ಸೋಮಪ್ಪ

ಸಂಡೂರು ಜ 6 : ಸರ್ಕಾರ ಮಹಿಳೆಯರಿಗೆ, ಯುವತಿಯರಿಗೆ, ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತಹ, ಆರೋಗ್ಯ ರಕ್ಷಣೆ ಮಾಡುವಂತಹ ಮಹತ್ತರ ಯೋಜನೆಯಾದ ಶುಚಿ ಯೋಜನೆಯನ್ನು ಜಾರಿಗೆ ತಂದಿತ್ತು, ಅದರೆ ಈಗ ಬಿಜೆಪಿ ಸರ್ಕಾರ ಏಕಾಏಕಿ ಸ್ಥಗಿತಗೊಳಿಸುವ ಮೂಲಕ ನಿಜವಾದ ದೇಶದ ಆಧಾರ ಸ್ಥಂಭಗಳಾದ ಯುವತಿಯರನ್ನೇ ಮರೆಯುವಂತಹ, ಬಡವರನ್ನು ದೂರತಳ್ಳುವಂತಹ ನೀತಿಯನ್ನು ಕೈ ಬಿಡಬೇಕು ಎಂದು ಬಳ್ಳಾರಿ ಜಿಲ್ಲಾ ಕಾಂಗ್ರೇಸ್ ಮಹಿಳಾ ಘಟಕದ ಅಧ್ಯಕ್ಷೆ ಆಶಾಲತಾ ಸೋಮಪ್ಪ ಒತ್ತಾಯಿಸಿದರು.
ಅವರು ಪಟ್ಟಣದ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ತಾಲೂಕು ಮಹಿಳಾ ಕಾಂಗ್ರೇಸ್, ಜಿಲ್ಲಾ ಮಹಿಳಾ ಕಾಂಗ್ರೇಸ್, ಯುವ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರಶ್ಮಿಯವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ಗ್ರಾಮೀಣ ಭಾಗಗಳಲ್ಲಿ ಹೆಣ್ಣು ಮಕ್ಕಳ ಸ್ಥಿತಿ ಶೋಚನೀಯವಾಗಿದೆ, ಋತುಚಕ್ರದ ಸಮಯದಲ್ಲಿ ಈಗಲೂ ಹಳೇಯ ಬಟ್ಟೆಗಳನ್ನೇ ಗ್ರಾಮೀಣ ಮಹಿಳೆಯರು ಬಳಸುವ ಮೂಲಕ ಹಲವಾರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ, ಇದರಿಂದ ತಪ್ಪಿಸಲು ಈ ಹಿಂದೆ ಸರ್ಕಾರ ಶುಚಿ ಯೋಜನೆಯ ಮೂಲಕ ಉತ್ತಮ ಕೆಲಸ ಮಾಡಿತ್ತು, ಆರೋಗ್ಯ ರಕ್ಷಣೆಗೆ, ಗ್ರಾಮೀಣ ಯುವತಿಯರಿಗೆ, ಮಹಿಳೆಯರಿಗೆ ಅನುಕೂಲವಾಗಿತ್ತು, ಅದರೆ ಕೋವಿಡ್ ನೆಪ ಒಡ್ಡಿ ಸರ್ಕಾರ ಸ್ಥಗಿತ ಗೊಳಿಸಿರುವುದು ಸರಿಯಲ್ಲ ತಕ್ಷಣ ತಡೆಯನ್ನು ಹಿಂಪಡೆದು ಮತ್ತೋಮ್ಮೆ ಜಾರಿಗೆ ತರಬೇಕು, ಆರೋಗ್ಯ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಮಹಿಳಾ ಘಟಕದ ಮುಖಂಡರಾದ ಪಿ.ಈರಮ್ಮ ಮಾತನಾಡಿ ಸರ್ಕಾರ ಉಚಿತವಾಗಿ ಹೆಣ್ಣುಮಕ್ಕಳಿಗೆ ನೀಡುತ್ತಿದ್ದ ಪ್ಯಾಡ್ ವ್ಯವಸ್ಥೆಯನ್ನು ತಕ್ಷಣ ಜಾರಿಗೆ ತರಬೇಕು, ಗ್ರಾಮೀಣ ಮಹಿಳೆಯರ ಬದುಕನ್ನು ರಕ್ಷಿಸಬೇಕು, ಅವರ ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು, ಅದರಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕನ್ನು ಕಟ್ಟಿಕೊಳ್ಳುವ ಈ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಮಾರಕವಾಗುವಂತಹ ನಿಯಮ ತಡೆದು ಶುಚಿ ಯೋಜನೆಯನ್ನು ಜಾರಿಗೆ ತರಬೇಕು ಎಂದರು.
ಈ ಸಂದರ್ಭದಲ್ಲಿ ಯುವ ಘಟಕದ ಮುಖಂಡರಾದ ನಿರ್ಮಲಾ, ನಂದಿನಿ, ಗಂಗಾಬಾಯಿ, ರಾಮಿ ಬಾಯಿ, ಸರೋಜ, ಶಾಜಾದಿ, ರೇಣುಕ, ಪವಿತ್ರ, ನಿರ್ಮಲಾ, ಶೋಭಾಉಪ್ಪಾರಳ್ಳಿ, ಪುಷ್ಪಲತಾ, ಲಾವಣೈ ಇತರ ಹಲವಾರು ಮಹಿಳೆಯರು ಶುಚಿ ಯೋಜನೆ ಮುಂದುವರಿಸಿ ಎಂದು ಒತ್ತಾಯಿಸಿ ತಹಶೀಲ್ಧಾರ್ ರಶ್ಮಿಯವರಿಗೆ ಮನವಿ ಪತ್ರ ಸಲ್ಲಿಸಿದರು.