ಸರ್ಕಾರದ ವೈಫಲ್ಯ ಸಿಎಲ್‌ಪಿ ಚರ್ಚೆ

ನಗರದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತಮಿಳುನಾಡು, ಗೋವಾ, ಪುದುಚೇರಿ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕಗೊಂಡಿರುವ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರುಗಳಾದ ಸಲೀಂ ಅಹ್ಮದ್, ಈಶ್ವರ ಖಂಡ್ರೆ, ಎಸ್.ಆರ್. ಪಾಟೀಲ್, ಹೆಚ್.ಕೆ.ಪಾಟೀಲ್ ಇದ್ದಾರೆ.

ಬೆಂಗಳೂರು, ಸೆ. ೧೬- ರಾಜ್ಯದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ವಿಫಲ, ಮಳೆ ಹಾಗೂ ಪ್ರವಾಹದಿಂದ ಉಂಟಾದ ಜನರ ಸಂಕಷ್ಟ ಒಂದೆಡೆಯಾದರೆ, ಕೆಲವು ಪ್ರದೇಶಗಳಲ್ಲಿ ಮಳೆಯಿಲ್ಲದೆ ರೈತರು ಪರದಾಡುವ ಸ್ಥಿತಿ ಸೇರಿದಂತೆ, ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಅಧಿವೇಶನದಲ್ಲಿ ಪ್ರಸ್ತಾಪಿಸುವ ಸಂಬಂಧ ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೆರೆ, ಮಳೆಹಾನಿ ಸಂತ್ರಸ್ತರಿಗೆ ಸಿಗದ ಪರಿಹಾರ, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ, ಜಿಎಸ್ ಟಿ ಪರಿಹಾರ ನೀಡಲು ಕೇಂದ್ರ ಸರ್ಕಾರ ಹಿಂದೇಟು, ಡಿಜೆ ಹಳ್ಳಿ, ಕೆಜೆ ಹಳ್ಳಿ ಘಟನೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಮುಂದಾಗಿದೆ.
ಕೆಪಿಸಿಸಿ ಅಧ್ಯಕ್ಷಡಿ.ಕೆ. ಶಿವಕುಮಾರ್ ಇವರ ಉಪಸ್ಥಿತಿಯಲ್ಲಿ ನಡೆದ ಈ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ ಎಲ್ಲ ಹಿರಿಯ ಮುಖಂಡರು, ಶಾಸಕರು ಪಾಲ್ಗೊಂಡಿದ್ದು, ಈ ವಿಧಾನ ಮಂಡಲದ ಅಧಿವೇಶನವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಸರ್ಕಾರವನ್ನು ಅಣಿಯುವ ಜತೆಗೆ ಸರ್ಕಾರದ ವೈಫಲ್ಯ, ದುರಾಡಳಿತವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಬಗ್ಗೆ ಚರ್ಚೆ ನಡೆಸಲಾಯಿತು.
ಕೊರೊನಾ ಸೋಂಕು ರಾಜ್ಯದಲ್ಲಿ ದಿನೇ ದಿನೇ ಏರುತ್ತಿದ್ದು, ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರ ಜತೆಗೆ ಔಷಧಿ, ಉಪಕರಣಗಳ ಖರೀದಿಯಲ್ಲೂ ಭಾರೀ ಭ್ರಷ್ಟಾಚಾರ ನಡೆಸಲಾಗಿದೆ. ಈ ಸಂಬಂಧ ಕಾಂಗ್ರೆಸ್ ಪಕ್ಷ ಲೆಕ್ಕ ಕೇಳಿರುವುದಕ್ಕೆ ಸರ್ಕಾರ ಉತ್ತರ ನೀಡಿಲ್ಲ. ಈ ಭ್ರಷ್ಟಾಚಾರ ವಿಚಾರವನ್ನೇ ಪ್ರಮುಖ ಅಸ್ತ್ರವಾಗಿ ಬಳಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರದ ಬಗ್ಗೆಯೂ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕರುಗಳು ಚರ್ಚೆ ನಡೆಸಿದರು.
ಕೊರೊನಾ ಜತೆಗೆ ಜಿಎಸ್‌ಟಿ ಪರಿಹಾರದಲ್ಲಿ ಕೇಂದ್ರ ಸರ್ಕಾರ ಕೈಕೊಟ್ಟಿರುವುದು, ನೆರೆ, ಮಳೆ ಹಾನಿ, ಸಂತ್ರಸ್ತರಿಗೆ ನೆರವು ನೀಡದಿರುವುದು, ಕೇಂದ್ರದ ಪರಿಹಾರ ಸಿಗದಿರುವುದು ಈ ಎಲ್ಲ ವಿಚಾರಗಳನ್ನು ಸಮರ್ಪಕವಾಗಿ ಪ್ರಸ್ತಾಪಿಸುವ ಬಗ್ಗೆ ಚರ್ಚೆಗಳು ನಡೆದವು.
ಶಾಸಕರು ಈ ಎಲ್ಲ ವಿಚಾರಗಳ ಬಗ್ಗೆಯೂ ಪೂರ್ವಸಿದ್ಧತೆ ಮಾಡಿಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಸರ್ವ ರೀತಿಯಲ್ಲೂ ಸಜ್ಜಾಗುವಂತೆ ಹಿರಿಯ ನಾಯಕರುಗಳು ಶಾಸಕರುಗಳಿಗೆ ಈ ಸಭೆಯಲ್ಲಿ ಸಲಹೆ, ಸೂಚನೆಗಳನ್ನು ನೀಡಿದರು.
ಪ್ರತಿದಿನ ಕಲಾಪಕ್ಕೂ ಮುನ್ನ ವಿರೋಧ ಪಕ್ಷದ ನಾಯಕರ ಕೊಠಡಿಯಲ್ಲಿ ಸಭೆ ಸೇರಿ ಅಂದಿನ ಶಾಸಕಾಂಗ ಸಭೆಯಲ್ಲಿ ಪ್ರಸ್ತಾಪಿಸಬೇಕಾದ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಕೊರೊನಾ ಪರಿಸ್ಥಿತಿಯ ನಡುವೆಯೇ ನಡೆಯುತ್ತಿರುವ ಈ ಅಧಿವೇಶನದಲ್ಲಿ ಶಾಸಕರು ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಿಕೊಂಡು ಸದನದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುವಂತೆಯೂ ನಾಯಕರುಗಳು ಸಲಹೆ ನೀಡಿದರು.
ಯಾವುದೇ ಕಾರಣಕ್ಕೂ ಸದಸ್ಯರು ಸದನದಿಂದ ದೂರ ಉಳಿಯದೆ ಕಲಾಪದಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುವಂತೆಯೂ ಪಕ್ಷದ ಹಿರಿಯ ನಾಯಕರು ಶಾಸಕರುಗಳಿಗೆ ಸಭೆಯಲ್ಲಿ ತಾಕೀತು ಮಾಡಿದರು.