ಸರ್ಕಾರದ ವೈದ್ಯಕೀಯ ಸರಬರಾಜು ನಿಗಮ : ವೆಂಟಿಲೇಟರ್ ಪೂರೈಕೆ


ಕಳೆದ ವರ್ಷ ೩೩, ಈಗ ೨೬ ಕಳಪೆ ವೆಂಟಿಲೇಟರ್ ಜಿಲ್ಲೆಗೆ
ರಾಯಚೂರು.ಮೇ.೨೯- ಜನರ ಜೀವ ಉಳಿಸುವ ವೆಂಟಿಲೇಟರ್ ಪೂರೈಕೆಯಲ್ಲೂ ಕಳಪೆ ಮತ್ತು ದೋಷಪೂರಿತ ವೆಂಟಿಲೇಟರ್ ಪೂರೈಸುವ ಮೂಲಕ ಮತ್ತೊಮ್ಮೆ ಪಿಎಂ ಕೇರ್ ವೆಂಟಿಲೇಟರ್‌ಗಳ ಕಳಪೆ ಬಹಿರಂಗಗೊಂಡಂತಾಗಿದೆ.
ಕಳೆದ ವರ್ಷ ಪಿಎಂ ಕೇರ್‌ನಿಂದ ಪೂರೈಕೆಯಾದ ವೆಂಟಿಲೇಟರ್‌ಗಳಲ್ಲಿ ೩೩ ವೆಂಟಿಲೇಟರ್‌ಗಳು ನಿರುಪಯುಕ್ತವಾಗಿ ರಿಮ್ಸ್ ಆಸ್ಪತ್ರೆಯಲ್ಲಿ ಬಿದ್ದಿವೆ. ಈಗ ಮತ್ತೇ ಕಳೆದ ವಾರವಷ್ಟೇ ಜಿಲ್ಲೆಗೆ ಬಂದ ೫೦ ವೆಂಟಿಲೇಟರ್‌ಗಳಲ್ಲಿ ೨೬ ವೆಂಟಿಲೇಟರ್‌ಗಳು ಬಳಕೆಗೆ ಯೋಗ್ಯವಾಗದಿರುವುದು ಜಿಲ್ಲೆಗೆ ವೆಂಟಿಲೇಟರ್ ಪೂರೈಕೆ ಹೆಸರಲ್ಲಿ ಕಳಪೆ ವೆಂಟಿಲೇಟರ್ ಪೂರೈಸಿ, ವಂಚಿಸಲಾಗುತ್ತಿದೆ ಎನ್ನುವುದು ಬಹಿರಂಗಗೊಂಡಿದೆ. ರಿಮ್ಸ್ ಆಸ್ಪತ್ರೆಯ ಮುಖ್ಯಸ್ಥರು ೨೬ ವೆಂಟಿಲೇಟರ್‌ಗಳ ದೋಷದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಇವುಗಳನ್ನು ಹಿಂದಿರುಗಿಸಲು ಕೋರಿದ್ದಾರೆ.
ವೆಂಟಿಲೇಟರ್‌ಗಳನ್ನು ಸರ್ಕಾರದ ಅಧೀನದ ಸಂಸ್ಥೆಯಾದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಪೂರೈಸಲಾಗಿದೆ. ಈ ವೆಂಟಿಲೇಟರ್‌ಗಳನ್ನು ಪಡೆಯುವಾಗಲೇ ಅವುಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳು ಗುಣಮಟ್ಟದ ವೆಂಟಿಲೇಟರ್ ಮಾತ್ರ ಬೇಡಿಕೆಯಿದ್ದ ಜಿಲ್ಲೆಗಳಿಗೆ ಪೂರೈಸಬೇಕು ಎನ್ನುವುದು ನಿಯಮವಾಗಿದೆ. ಆದರೆ, ೫೦ ವೆಂಟಿಲೇಟರಗಳಲ್ಲಿ ೨೬ ದೋಷಪೂರಿತ ವೆಂಟಿಲೇಟರ್ ಪೂರೈಕೆಯಾಗಿದ್ದಾದರೂ ಹೇಗೆ ಎನುವುದು ಗಮನಾರ್ಹ ಪ್ರಶ್ನೆಯಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದರೂ ವೆಂಟಿಲೇಟರ್ ಬೇಡಿಕೆ ಇರುವ ಸೋಂಕಿತರ ಸಂಖ್ಯೆ ತೀವ್ರವಾಗಿದೆ. ಸಕಾಲಕ್ಕೆ ವೆಂಟಿಲೇಟರ್ ಸೌಲಭ್ಯ ದೊರೆಯದಿದ್ದರೇ ಜನರು ಸಾಯುವುದು ನಿಶ್ಚಿತ. ಸರ್ಕಾರದಿಂದ ಕಳೆದ ವರ್ಷ ಪಿಎಂ ಕೇರ್‌ನಡಿ ಪೂರೈಸಿದ ೩೩ ವೆಂಟಿಲೇಟರ್‌ಗಳು ಇನ್ನೂವರೆಗೂ ಬಳಕೆಯಾಗುತ್ತಿಲ್ಲ. ಇವುಗಳ ದುರಸ್ತಿಯೂ ಸಾಧ್ಯವಾಗದ ಪರಿಸ್ಥಿತಿಯಿದೆ. ಈ ೩೩ ವೆಂಟಿಲೇಟರ್ ಕೊರತೆಗೆ ಜಿಲ್ಲೆಯಲ್ಲಿ ಅನೇಕರು ಮೃತಪಟ್ಟಂತಹ ಘಟನೆಗಳಿವೆ. ಹೈದ್ರಾಬಾದ್ ಕರ್ನಾಟಕದಲ್ಲಿ ಬಳ್ಳಾರಿಯ ನಂತರ ಕೊರೊನಾದಿಂದ ಅತಿಹೆಚ್ಚು ಮರಣ ಕಂಡ ಜಿಲ್ಲೆಯಾಗಿ ಗುರುತಿಸಿಕೊಂಡಿದೆ.
ಏಕಾಏಕಿ ೫೦೦, ೬೦೦ ಸೋಂಕಿತರು ರಿಮ್ಸ್ ಮತ್ತು ಓಪೆಕ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಆಕ್ಸಿಜನ್ ಮತ್ತು ವೆಂಟಿಲೇಟರ್ ಕೊರತೆಯಿಂದ ಉಸಿರುಗಟ್ಟಿ ಸತ್ತವರ ಸಂಖ್ಯೆಗೆ ಲೆಕ್ಕವೇ ಇಲ್ಲ. ಈ ಸಾವಿನ ಸಂಖ್ಯೆ ಬಹಿರಂಗ ಪಡಿಸುವಲ್ಲಿ ಇಂದಿಗೂ ಸಹ ರಿಮ್ಸ್ ಮತ್ತು ಜಿಲ್ಲಾಡಳಿತ ಮುಂದಾಗುತ್ತಿಲ್ಲ. ಆದರೆ, ಕೊರೊನಾ ರುದ್ರಭೂಮಿಯಲ್ಲಿ ಸಮಾಧಿಗಳ ಸಂಖ್ಯೆ ಜಿಲ್ಲೆಯಲ್ಲಿ ಕೊರೊನಾ ಮಾರಣಹೋಮಕ್ಕೆ ಸಾಕ್ಷಿಯಾಗಿ ನಿಂತಿವೆ. ಇಂತಹ ದಾರುಣ ಪರಿಸ್ಥಿತಿಯಲ್ಲಿ ವಿಳಂಬವಾದರೂ, ಒಂದಷ್ಟು ಜನರಿಗೆ ಉಪಯೋಗವಾಗಬಹುದಾಂದತಹ ೫೦ ವೆಂಟಿಲೇಟರ್ ಆಗಮನ ಸಮಾಧಾನಕ್ಕೆ ಕಾರಣವಾಗಬಹುದೆಂದು ಹೇಳುವ ಹಂತದಲ್ಲಿ ೨೬ ದೋಷ ಪೂರಿತ ವೆಂಟಿಲೇಟರ್‌ಗಳ ಪತ್ತೆ, ಮತ್ತೇ ಜಿಲ್ಲೆಯಲ್ಲಿ ವೆಂಟಿಲೇಟರ್ ಕೊರತೆಗೆ ಕಾರಣವಾಗಿವೆ.