ಸರ್ಕಾರದ ವೆಚ್ಚದಲ್ಲಿ ಸಮಾವೇಶ

ಹಾವೇರಿ,ಮಾ12: ಜನ ಸಂಕಷ್ಟದಲ್ಲಿದ್ದಾರೆ. ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಬೆಳೆ ಬದುಕಿಸಿಕೊಳ್ಳದೇ ರೈತರು ಆತಂಕಕ್ಕೀಡಾಗಿದ್ದಾರೆ. ಇಂಥ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರದ ನಾನಾ ಯೋಜನೆಗಳ ಫಲಾನುಭವಿಗಳನ್ನು ಒತ್ತಾಯಪೂರ್ವಕವಾಗಿ ಕರೆಯಿಸಿ ಸರ್ಕಾರದ ಖರ್ಚಿನಲ್ಲಿ ಸಮಾವೇಶ ನಡೆಸಿ ಅದನ್ನೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಶಾಸಕ ಶ್ರೀನಿವಾಸ ಮಾನೆ ರಾಜ್ಯ ಸರ್ಕಾರದ ನಡೆಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು, ಕುಡಿಯುವ ನೀರಿನ ಹಾಹಾಕಾರ ತಪ್ಪಿಸಲು ಕೊಳವೆಬಾವಿ ಕೊರೆಯಿಸಲೂ ಹಣ ಬಿಡುಗಡೆ ಮಾಡುತ್ತಿಲ್ಲ. ಹಾನಗಲ್ ತಾಲೂಕಿನಲ್ಲಿ ಸುಮಾರು 50 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಮಳೆ ಬೀಳದೇ, ಸಮರ್ಪಕ ವಿದ್ಯುತ್ ಪೂರೈಕೆಯಾಗದೇ ಬೆಳೆಗಳು ಒಣಗುತ್ತಿವೆ. ರೈತರಿಗೆ ಬೆಳೆಗಳನ್ನು ಬದುಕಿಸಿಕೊಳ್ಳಲು ನೀರು, ವಿದ್ಯುತ್ ಕೊಡಲಾಗದ ಈ ಸರ್ಕಾರ ಅವರೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಹರಿಹಾಯ್ದರು.