ಸರ್ಕಾರದ ವಿಳಂಬ ಧೋರಣೆ: ಆಗಸ್ಟ್ 10 ರಂದು ಪ್ರತಿಭಟನೆ

ಹುಬ್ಬಳ್ಳಿ,ಜೂ23: ಕೆ.ಪಿ.ಟಿ.ಸಿ.ಎಲ್ ಮತ್ತು ಎಸ್ಕಾಂ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸೇವಾ ಭದ್ರತೆ ಹಾಗೂ ಸಮಿತಿ ಅನುಷ್ಠಾನ ಮಾಡುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಣೆ ಮಾಡುತ್ತಿದ್ದು, ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಕೆ.ಪಿ.ಟಿ.ಸಿ.ಎಲ್ ಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆ (ರಿ) ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್’ನಲ್ಲಿ ಅಗಸ್ಟ್ 10 ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆಯ ರಾಜ್ಯಾಧ್ಯಕ್ಷ ಲೀಲಾಸಾಗರ ಎಂ.ಎಸ್ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 18-20 ವರ್ಷಗಳಿಂದ ಕೆ.ಪಿ.ಟಿ.ಸಿ.ಎಲ್ ಮತ್ತು ಎಸ್ಕಾಂ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಸ್ಟೇಷನ್ ಆಪರೇಟರ್, ಸಹಾಯಕರು, ಗ್ಯಾಂಗ್’ಮನ್, ಮೀಟರ್ ರೀಡರ್ ಸೇರಿದಂತೆ ವಿವಿಧ ರೀತಿಯ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲೇ ಪ್ರಾಣಾಪಾಯದ ಕೆಲಸಗಳನ್ನು ನಿರ್ವಹಿಸುತ್ತಿರುವ ನೌಕರರು ಯಾವುದೇ ಸೇವಾ ಭದ್ರತೆಯಿಲ್ಲದೇ ಅಭದ್ರತೆಯ ಜೀವನ ನಡೆಸುವಂತಾಗಿದೆ. ಕೂಡಲೇ ಸರ್ಕಾರ ಖಾಸಗಿ ಏಜೆನ್ಸಿಯನ್ನು ಹೊರಗಿಟ್ಟು ನೇರವಾಗಿ ಇಲಾಖೆಯಿಂದಲೇ ಶೀಘ್ರವಾಗಿ ಸೇವಾ ಭದ್ರತೆ ಜೊತೆಗೆ ಅಗತ್ಯ ಸವಲತ್ತುಗಳನ್ನು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಈಗಾಗಲೇ ಈ ಹಿಂದಿನ ಸರ್ಕಾರದಲ್ಲಿ 2022 ಡಿಸೆಂಬರ್ 3 ರಿಂದ 2023 ಮಾರ್ಚ್ 3 ರವರೆಗೆ ಹೊರಗುತ್ತಿಗೆ ನೌಕರರ ಪರವಾಗಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆ ಮಾಡಲು ಆದೇಶವಿದ್ದರೂ ಹಿಂದಿನ ಬಿಜೆಪಿ ಸರ್ಕಾರ ವಿಳಂಬ ಧೋರಣೆ ಅನುಸರಿಸಿ ನೌಕರರಿಗೆ ಅನ್ಯಾಯ ಮಾಡಿದೆ. ಈ ದಿಸೆಯಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನೌಕರರ ಪರವಾದ ನಿಲುವನ್ನು ತೆಗೆದುಕೊಂಡು ಇಂಧನ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ನ್ಯಾಯ ಒದಗಿಸಬೇಕು. ಇಲ್ಲದೇ ಹೋದಲ್ಲಿ ಬರುವ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಪರಶುರಾಮ ರಾಠೋಡ, ನಿರ್ದೇಶಕ ವಿರೇಶ ಜವಳಿ, ಮಂಜುನಾಥ ಹಾದಿಮನಿ, ನವೀನ ಎಸ್.ಕೆ, ವಿನೋದ ರಾಠೋಡ, ಬಾಳೇಶ ಹವಣಿ, ರಮೇಶ ಬೆಣ್ಣಿ ಉಪಸ್ಥಿತರಿದ್ದರು.