ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಚಾಲನೆ

ಬೆಂಗಳೂರು,ಸೆ.೧೭:ರಾಜ್ಯಸರ್ಕಾರದ ವೈಫಲ್ಯವನ್ನು ಖಂಡಿಸಿ ಬಿಜೆಪಿ ನಾಯಕರುಗಳು ರಾಜ್ಯಾದ್ಯಂತ ಇಂದಿನಿಂದ ಪ್ರವಾಸ ಆರಂಭಿಸಿ ವಿವಿಧ ಜಿಲ್ಲೆಗಳಲ್ಲಿ ಸಭೆ-ಸಮಾವೇಶಗಳನ್ನು ನಡೆಸಿ ಸರ್ಕಾರದ ವಿರುದ್ಧ ರಣ ಕಹಳೆ ಮೊಳಗಿಸಿದ್ದಾರೆ
ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಹುಟ್ಟುಹಬ್ಬದ ದಿನದಂದೇ ರಾಜ್ಯ ಬಿಜೆಪಿ ಕಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಆರಂಭಿಸಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಈ ಜಿಲ್ಲಾ ಪ್ರವಾಸ ನಡೆದಿದೆ.
ಕೋಲಾರದ ಮುಳಬಾಗಿಲಿನ ಸಮೀಪದ ಕುರುಡುಮಲೆ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧದ ಹೋರಾಟಕ್ಕೆ ಚಾಲನೆ ನೀಡಿದ್ದಾರೆ.
ಕುರುಡುಮಲೆ ದೇವಸ್ಥಾನದಲ್ಲಿ ಪೂಜೆ ಬಳಿಕ ಕುರುಡುಮಲೆಯಲ್ಲೇ ಸಾರ್ವಜನಿಕ ಸಭೆಯನ್ನು ನಡೆಸಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟದ ರಣಕಹಳೆಯನ್ನು ಮೊಳಗಿಸಲಾಗಿದೆ.
ಈ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಸದಾನಂದ ಗೌಡ, ಕೇಂದ್ರ ಸಚಿವ ಪ್ರಲ್ಹಾದ್‌ಜೋಷಿ, ಬಿಜೆಪಿ ಮುಖಂಡರುಗಳಾದ ಸಿ.ಟಿ ರವಿ, ಗೋವಿಂದಕಾರಜೋಳ, ಕೆ.ಎಸ್ ಈಶ್ವರಪ್ಪ, ವಿ. ಸೋಮಣ್ಣ, ಆರ್. ಅಶೋಕ್ ಸೇರಿದಂತೆ ಎಲ್ಲ ಶಾಸಕರು, ಸಂಸದರು ಭಾಗಿಯಾಗಿದ್ದಾರೆ.
ವಾಗ್ದಾಳಿ
ಈ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ವಾಗ್ದಾಳಿ ನಡೆಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ೧೦೦ ದಿನಗಳಲ್ಲೇ ಜನಪರ ಆಡಳಿತ ನೀಡಲು ವಿಫಲವಾಗಿದೆ. ಇದು ಜನವಿರೋಧಿ ಹಾಗೂ ರೈತ ವಿರೋಧಿ ಸರ್ಕಾರ ಎಂದು ಟೀಕಿಸಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್‌ಗೆ ಜನ ಪಾಠ ಕಲಿಸಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಕುರುಡುಮಲೆ ವಿನಾಯಕ ದೇವಾಲಯದಲ್ಲಿ ಇಂದು ಪೂಜೆಯಲ್ಲಿ ಪಾಲ್ಗೊಂಡ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರು ದೇವಸ್ಥಾನದ ಹುಂಡಿಗೆ ೧ ಲಕ್ಷ ರೂ. ಕಾಣಿಕೆ ಹಾಕಿ, ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಸಂಕಲ್ಪವನ್ನು ಮಾಡಿ ವಿಶೇಷ ಪೂಜೆ ಸಲ್ಲಿಸಿದರು.