ಸರ್ಕಾರದ ವತಿಯಿಂದ ರೇಣುಕಾಚಾರ್ಯ ಜಯಂತಿ ಆಚರಿಸಲಿ: ಕರಂಜಿ

ಬೀದರ್,ಮಾ.26-ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಸಹಕಾರಿ ಮುಖಂಡ ಜಗನ್ನಾಥ ಕರಂಜಿ ಆಗ್ರಹಿಸಿದರು.
ನಗರದ ಬಸವೇಶ್ವರ ವೃತ್ತದ ಬಳಿಯ ಶ್ರೀ ರೇಣುಕಾ ಮಾಹೇಶ್ವರ ಪತ್ತಿನ ಸೌಹಾರ್ದ ಬ್ಯಾಂಕ್ ಆವರಣದಲ್ಲಿ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಯುಗಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರೇಣುಕಾಚಾರ್ಯರು ಒಂದು ಜಾತಿ, ಧರ್ಮಕ್ಕೆ ಸೀಮಿತರಾಗದೆ ಎಲ್ಲ ಧರ್ಮಿಯರಿಗೆ ಆದರ್ಶಪ್ರಾಯರಾಗಿದ್ದರು. ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶವನ್ನು ಮೊಟ್ಟ ಮೊದಲನೆಯದಾಗಿ ಜಗತ್ತಿಗೆ ಸಾರಿದವರು ಜಗದ್ಗುರು ರೇಣುಕಾಚಾರ್ಯರು. ಇಂದಿನ ಮಕ್ಕಳು ರೇಣುಕಾಚಾರ್ಯರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುವಂತೆ ಕರೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿ, ಶ್ರೀ ರೇಣುಕಾಚಾರ್ಯರು ಜಗತ್ತಿನ ಎಲ್ಲ ಧರ್ಮಗಳನ್ನು ಗೌರವಿಸಿದಲ್ಲದೆ, ಎಲ್ಲಾ ಧರ್ಮದ ಸಾರ ಒಂದೇ ಎಂಬ ಸಂದೇಶವನ್ನು ವಿಶ್ವಕ್ಕೆ ಪರಿಚಯಿಸಿದರು. ರೇಣುಕಾ ಚಾರ್ಯರ ಸಮುದಾಯ ಒಂದು ಭಾಗಕ್ಕೆ ಸೀಮಿತವಾಗಿರದೆ ದೇಶದ ಎಲ್ಲ ಮೂಲೆಗಳಿಗೆ ಆವರಿಸಿದೆ ಎಂದರು.
ಬ್ಯಾಂಕಿನ ಅಧ್ಯಕ್ಷ ಮಹೇಶ್ವರ ಸ್ವಾಮಿ, ಉಪಾಧ್ಯಕ್ಷ ಶ್ರೀಕಾಂತ ಸ್ವಾಮಿ ಸೋಲಪೂರ, ಬ್ಯಾಂಕಿನ ನಿರ್ದೇಶಕರಾದ ಡಾ.ಶರಣಯ್ಯ ಹಿರೇಮಠ, ಮರುಳರಾಧ್ಯ ಸ್ವಾಮಿ, ಸಂಗಮೇಶ ಸ್ವಾಮಿ, ಬಸವರಾಜ ಸ್ವಾಮಿ ಚಿಟ್ಟಾ, ಜ್ಯೋತಿ ಶ್ರೀಕಾಂತ ಸ್ವಾಮಿ, ಭಾಗ್ಯಶ್ರೀ, ರೇಖಾ, ಹಣಮಂತ ಪಟ್ನೆ, ನಾಗರಾಜ ಸೇರಿದಂತೆ ಇತರೆ ನಿರ್ದೇಶಕರು ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.