ಸರ್ಕಾರದ ಲಾಕ್ಡೌನ್ ನಿಯಮವೇ ಹಾಸ್ಯಾಸ್ಪದ

ದಾವಣಗೆರೆ.ಏ.೩೦; ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣ ಮಾಡಲು 14 ದಿನಗಳಲ್ಲಿ ಲಾಕ್ಡೌನ್ ಘೋಷಿಸಿದೆ, ಆದರೆ ಸರ್ಕಾರ ಲಾಕ್ಡೌನ್ ಗೆ ವಿಧಿಸಿರುವ ನಿಯಮಗಳನ್ನು ನೋಡಿದರೆ, ನಿಜವಾಗಿಯೂ ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ಡೌನ್ ಮಾಡಲಾಗಿದೆಯೋ ಅಥವಾ ಸಾರ್ವಜನಿಕರು ಮತ್ತು ಮಾಧ್ಯಮದವರ ಒತ್ತಡಕ್ಕಾಗಿ ಲಾಕ್ಡೌನ್ ಘೋಷಿಸಿದೆಯೋ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ.ಎಲ್ ಹರೀಶ್ ಬಸಾಪುರ ಹೇಳಿದ್ದಾರೆ.ಬೆಳಿಗ್ಗೆ ಆರರಿಂದ ಹತ್ತು ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ವಿನಾಯಿತಿ ಅದರಲ್ಲಿ ಮದ್ಯವೂ ಸೇರಿ, ಬ್ಯಾಂಕುಗಳು ಹಾಗೂ ಇನ್ನಿತರ ಕಚೇರಿಗಳು ಮಧ್ಯಾಹ್ನ 2 ಗಂಟೆಯವರೆಗೆ ತೆರೆದಿರುತ್ತವೆ, ಸರ್ಕಾರಿ ಕಛೇರಿಗಳು ಕಾರ್ಯನಿರ್ವಹಿಸುತ್ತವೆ ಕೆಲವು ಷರತ್ತುಗಳಿಗೆ ಒಳಪಟ್ಟು, ಅಂದಮೇಲೆ ಪೊಲೀಸ್ ಇಲಾಖೆ ಎಷ್ಟೇ ಶ್ರಮಪಟ್ಟರು ಜನರ ಓಡಾಟವನ್ನು ನಿಯಂತ್ರಿಸಲು ಸಾಧ್ಯವೇ?? ಜನರ ಓಡಾಟವನ್ನು ನಿಯಂತ್ರಿಸಲು ಸಾಧ್ಯವಿಲ್ಲದ ಮೇಲೆ ಕೋವಿಡ್ ತಡೆಗಟ್ಟಲು ಹೇಗೆ ಸಾಧ್ಯವಾದೀತು.
ಸಾರ್ವಜನಿಕರಿಗೆ ಒಂದು ವಾರ ಕಷ್ಟವಾದರೂ ಪರವಾಗಿಲ್ಲ, ಎರಡು ದಿನ ಸಮಯವಕಾಶ ನೀಡಿ. ಅಗತ್ಯ ವಸ್ತುಗಳು ಹಾಗೂ ಮಾತ್ರೆ ಮುಂತಾದ ವೈದ್ಯಕೀಯ ಅವಶ್ಯಕತೆಗಳನ್ನು ಖರೀದಿ ಮಾಡಲು ತಿಳಿಸಿ.ಮುಂದಿನ ಒಂದು ವಾರ ಯಾವುದೇ ಕಾರಣಕ್ಕೂ ಯಾರೂ ಕೂಡ ಓಡಾಡಬಾರದು ಎಂಬ ದಿಟ್ಟ ನಿರ್ಧಾರ ತೆಗೆದುಕೊಂಡು, ಈ ಕೋವಿಡ್ ಚೈನ್ ಲಿಂಕ್ ಬ್ರೇಕ್ ಮಾಡಬೇಕೆ ವಿನಹ, ಈ ರೀತಿ ಅರ್ಧಂಬರ್ಧ ರಿಯಾಯಿತಿಗಳಿಂದ ಕೋವಿಡ್ ನಿಯಂತ್ರಣಕ್ಕೂ ಬಾರದು, ಜನತೆ ಆಸ್ಪತ್ರೆಗೆ ಅಲೆದಾಡುವುದು ತಪ್ಪದು ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಇರದು ಎಂದರು.