ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಿರಿ: ಸಚಿವ ಪ್ರಭು.ಬಿ ಚವ್ಹಾಣ

ಬೀದರ:ಮಾ.17:ರೈತರಿಗಾಗಿ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇವುಗಳ ಸದುಪಯೋಗ ಪಡೆದು ಕೃಷಿ ಉತ್ಪಾದನೆಯನ್ನು ಹೆಚ್ಚಿಕೊಳ್ಳಲು ರೈತರು ಪ್ರಯತ್ನಿಸಬೇಕು ಎಂದು ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು.

ಕೃಷಿ ಇಲಾಖೆ, ಔರಾದ ರೈತ ಸಂಪರ್ಕ ಕೇಂದ್ರದ ವತಿಯಿಂದ ಮಾರ್ಚ್ 16ರಂದು ಔರಾದ ರೈತರ ತರಬೇತಿ ಕೇಂದ್ರದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅನುದಾನದ ಅಭಿವೃದ್ಧಿ ಘಟಕ ಎಕಂಬಾ ನಾಲಾ ಜಲಾನಯನ ಕಾರ್ಯಕ್ರಮದ ಅಡಿಯಲ್ಲಿ ಹೈನುಗಾರಿಕೆ ರೈತರಿಗೆ ಉಪಕರಣ ವಿತರಣೆ ಹಾಗೂ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರಿಗೆ ಉದ್ಯಮಶೀಲತಾ ಜಾಗೃತಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರ ಅಭಿವೃದ್ಧಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕಲ್ಪವಾಗಿದೆ. ಈ ದಿಶೆಯಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದರ ಸದುಪಯೋಗ ಪಡೆಯಬೇಕು. ಕೃಷಿಯಲ್ಲಿ ಮಣ್ಣಿನ ಪಾತ್ರ ಬಹುಮುಖ್ಯವಾಗಿರುತ್ತದೆ. ರೈತರು ಮನಬಂದಂತೆ ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡದೆ ಕೃಷಿ ಅಧಿಕಾರಿಗಳ ಸಹಾಯ ಪಡೆದು ಹೆಚ್ಚು ನಷ್ಟವಿಲ್ಲದೇ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಹೈನುಗಾರಿಕೆಯು ರೈತರ ಜೀವನಕ್ಕೆ ನೆರವಾಗುವ ಉತ್ತಮ ಅವಕಾಶವಾಗಿದೆ. ಇದನ್ನು ಉದ್ಯಮದ ರೀತಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು ಕೆಲಸ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಇಲಾಖೆಯ ಸಹಾಯ ಪಡೆದು ಇನ್ನಷ್ಟು ಪ್ರಗತಿ ಸಾಧಿಸಲು ಮಹಿಳೆಯರು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ.ಎ.ಕೆ ಅನ್ಸಾರಿ ಅವರು ಮಾತನಾಡಿ, ಜಲಾನಯನ ಪ್ರದೇಶದಲ್ಲಿ ಮಣ್ಣು ಮತ್ತು ನೀರು ಕೊಚ್ಚಿ ಹೋಗುವ ಸಾಧ್ಯತೆಯಿರುತ್ತದೆ. ಮಣ್ಣಿನ ಸವಕಳಿಕೆಯನ್ನು ಉಳಿಸಿಕೊಳ್ಳಲು ರೈತರು ಯತ್ನಿಸಬೇಕು. ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಇದೇ ವೇಳೆ ಹೈನುಗಾರಿಕೆಯಲ್ಲಿ ತೊಡಗಿರುವ ಬಾದಲಗಾಂವ ಮತ್ತು ಏಕಂಬಾ ಗ್ರಾಮ ಪಂಚಾಯಿತಿಯ ರೈತ ಮಹಿಳೆಯರಿಗೆ ಹಾಲು ಹಿಂಡುವ ಯಂತ್ರ, ಮ್ಯಾಟ್, ಹುಲ್ಲು ಕತ್ತರುವ ಯಂತ್ರಗಳನ್ನು ವಿತರಿಸಿ, ಈ ಯಂತ್ರಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳಾದ ರಾಜೇಂದ್ರ ಮಾಳೆ, ಮಲ್ಲಿಕಾರ್ಜುನ ನಿಂಗದಳ್ಳಿ ಅವರು ತರಬೇತಿ ನಡೆಸಿಕೊಟ್ಟರು. ಔರಾದ ನರೇಗಾ ಸಹಾಯಕ ನಿರ್ದೇಶಕರಾದ ಸುಧೀರ್, ಮುಖಂಡರಾದ ದೊಂಡಿಬಾ ನರೋಟೆ, ಸಂತೋಷ ಪೋಕಲವಾರ, ಕೇರಬಾ ಪವಾರ್, ರಾಮಶೆಟ್ಟಿ ಪನ್ನಾಳೆ, ಪ್ರತೀಕ್ ಚವ್ಹಾಣ ಹಾಗೂ ಇತರರು ಉಪಸ್ಥಿತರಿದ್ದರು.