ಸರ್ಕಾರದ ಯೋಜನೆಗಳ ಯಶಸ್ಸಿಗೆ ಪತ್ರಕರ್ತರು ಭಾಗಿಯಾಗಬೇಕು

ಚಿತ್ರದುರ್ಗ.ಮಾ.೧೮; ಸರ್ಕಾರದ ಯೋಜನೆಗಳ ಮಾಹಿತಿ ಪಡೆಯುವ ಮೂಲಕ ಸರ್ಕಾರದ ಯೋಜನೆಗಳ ಯಶಸ್ಸಿಗೆ ಕಣ್ಣು ಮತ್ತು ಕಿವಿಯಾಗಿ ಪತ್ರಕರ್ತರು ಭಾಗಿಯಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ ಹೇಳಿದರು.ನಗರದ ಐಶ್ವರ್ಯ ಫೋರ್ಟ್ ಉತ್ಸವ ಹಾಲ್‍ನಲ್ಲಿ  ಭಾರತ ಸರ್ಕಾರದ ವಾರ್ತಾಶಾಖೆ (ಪಿಐಬಿ) ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ “ವಾರ್ತಾಲಾಪ”ಚಿತ್ರದುರ್ಗ ಜಿಲ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಲು ಕಾರ್ಯಾಗಾರ ಆಯೋಜಿಸಿರುವುದು ಉತ್ತಮ ಕಾರ್ಯ. ಇದೇ ರೀತಿಯಾಗಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಲು ಕಾರ್ಯಗಾರ ಏರ್ಪಡಿಸುವ ಚಿಂತನೆ ಇದೆ ಎಂದು ಹೇಳಿದರು.