ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು

ಕೋಲಾರ,ಜೂ.೩೦-ಗ್ರಾ.ಮ ಪಂಚಾಯಿತಿಗಳು ಜನರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರಿಗಾಗಿ ರೂಪಿಸಿರುವ ಜನಪರ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ತಿಳಿಸಿದರು.
ತಾಲೂಕಿನ ವಕ್ಕಲೇರಿಯ ಗ್ರಾ.ಪಂ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿ, ಹೋಬಳಿ ಕೇಂದ್ರದಲ್ಲಿ ನೂತನವಾಗಿ ಕಟ್ಟಡ ನಿರ್ಮಾಣ ಮಾಡಿದ್ದು ಇದರಿಂದ ಜನರಿಗೆ ಯೋಜನೆಗಳನ್ನು ತಲುಪಿಸಲು ಸಾಧ್ಯ, ಕಟ್ಟಡ ಇದ್ದರೆ ಸಾಲದು ನಿಮಗೆ ಜನರ ಪರ ಸೇವೆಯ ಕಾಳಜಿಯಿರಬೇಕು ಆಗ ಮಾತ್ರ ನೂತನ ಕಟ್ಟಡ ಸ್ಥಾಪಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಈ ಗ್ಯಾರಂಟಿ ಯೋಜನೆಗಳನ್ನು ಗಾಮ ಪಂಚಾಯಿತಿ ಮೂಲಕ ಜನರಿಗೆ ತಲುಪಿಸ ಬೇಕು ಯೋಜನೆಗಳ ಬಗ್ಗೆ ಅರ್ಜಿಗಳನ್ನು ಪಡೆಯಲು ಗ್ರಾಪಂ ಕಟ್ಟಡದಲ್ಲಿ ಒಂದು ವಿಶೇಷವಾದ ಕೇಂದ್ರವನ್ನು ಸ್ಥಾಪಿಸಿ ಅದರ ಮೂಲಕ ಪ್ರತಿ ಹಳ್ಳಿಯಲ್ಲಿ ಮಾಹಿತಿ ನೀಡುವ ಜೊತೆಗೆ ಗ್ಯಾರಂಟಿ ಯೋಜನೆಗಳ ಸಮರ್ಪಕವಾಗಿ ಅನುಷ್ಠಾನ ಗೊಳಿಸ ಬೇಕು ಎಂದು ತಿಳಿಸಿದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ,ನಾಗರೀಕರು ಕೂಡಾ ಉತ್ತಮ ಸೇವೆಗಳನ್ನು ಗ್ರಾಪಂನಿಂದ ಪಡೆಯಬೇಕು, ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಹೋಗಿ ಮತ ಕೇಳುವ ರೀತಿಯಲ್ಲಿ ಚುನಾವಣೆ ನಂತರ ಅವರ ಸಮಸ್ಯೆಗಳನ್ನು ಬಗೆಹರಿಸು ನಿಟ್ಟಿನಲ್ಲಿ ಕೆಲಸ ಮಾಡಿಕೊಡಬೇಕೆಂದರು.ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಅಭಿವೃದ್ಧಿಯ ಜೊತೆಗೆ ಮಾದರಿ ಗ್ರಾಪಂ ಮಾಡಲು ಎಲ್ಲರೂ ಕೈಜೋಡಿಸಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಬಿಟ್ಟು ಎಲ್ಲರೂ ಒಂದಾಗಿ ಅಭಿವೃದ್ಧಿ ಮಾಡೋಣ ರಾಜಕೀಯ ಕಟ್ಟಿಕೊಂಡು ಹೋದವರು ಯಾರು ಕೂಡ ಉದ್ದಾರವಾಗಿಲ್ಲ ಎಲ್ಲಾ ಕಡೆ ಅಭಿವೃದ್ಧಿಗೆ ಪೂರಕವಾಗಿರಲು ಇಂತಹ ಕಟ್ಟಡಗಳು ಆಗಬೇಕು ಹಣದ ಕೊರತೆಯಿಲ್ಲ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.
ವಕ್ಕಲೇರಿ ಗ್ರಾಪಂ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ತಾಪಂ ಇಒ ಪಿ.ಮುನಿಯಪ್ಪ, ಹಿರಿಯ ಮುಖಂಡ ವಕ್ಕಲೇರಿ ರಾಮು, ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್, ವಕ್ಕಲೇರಿ ರಾಜಪ್ಪ, ಸೊಸೈಟಿ ಕೆ.ಆನಂದ್ ಕುಮಾರ್, ಸೀಸಂದ್ರ ಗೋಪಾಲಗೌಡ, ಚಂಜಿಮಲೆ ರಮೇಶ್, ಅಂಬರೀಶ್, ಮುರಳಿಗೌಡ, ಇನಾಯತ್, ಗ್ರಾಪಂ ಉಪಾಧ್ಯಕ್ಷೆ ಚಿನ್ನಮ್ಮ, ಪಿಡಿಒ ಮಂಜುನಾಥ್ ಪ್ರಸಾದ್ ಉಪಸ್ಥಿತಿರಿದ್ದರು. .