ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಜನರಿಗೆ ತಲುಪಿಸಿ- ಸಚಿವ ಪ್ರಿಯಾಂಕ್ ಖರ್ಗೆ ಪಿಡಿಒಗಳಿಗೆ ಸೂಚನೆ.

ಕಲಬುರಗಿ; ಜು.20:ಜಿಲ್ಲಾ ಪಂಚಾಯತ್ ವ್ಯವಸ್ಥೆಯನ್ನು ಸದೃಢಗೊಳಿಸುವ ಸರ್ಕಾರದ ಆಶಯಗಳನ್ನು ಸಾಕಾರಗೊಳಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಹಿರಿದಾಗಿದ್ದು, ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಗ್ರಾಮೀಣ ಜನರಿಗೆ ಯಶಸ್ವಿಯಾಗಿ ತಲುಪಿಸಲು ಬದ್ಧತೆ ತೋರಬೇಕೆಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರತಿನಿಧಿಗಳು ಇಂದು ಬೆಂಗಳೂರಿನ ಕಚೇರಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರೊಂದಿಗೆ ಸೌಹಾರ್ದಯುತ ಚರ್ಚೆ ನಡೆಸಿದರು.
ರಾಜ್ಯ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸುವುದು ಸೇರಿದಂತೆ 18 ಬೇಡಿಕೆಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸಚಿವರಿಗೆ ಸಲ್ಲಿಸಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಬೇಡಿಕೆಗಳ ಸಾಧಕ ಬಾಧಕಗಳನ್ನು ಪರಿಶೀಲಿಸಿ ನಿಯಮಗಳ ಅಡಿಯಲ್ಲಿ ಕಾರ್ಯರೂಪಕ್ಕೆ ತರಬಹುದಾದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದು. ಜೊತೆಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಸಮಸ್ಯೆಗಳಿದ್ದಲ್ಲಿ ತಮ್ಮನ್ನು ನೇರವಾಗಿ ಭೇಟಿ ಮಾಡಿ ತಿಳಿಸುವಂತೆ ಸಚಿವರು ಸೂಚಿಸಿದರು.

ಗ್ರಾಮಗಳ ಅಭಿವೃದ್ಧಿ ಜೊತೆಗೆ ಅಧಿಕಾರಿಗಳ ಕುಂದುಕೊರತೆಗಳನ್ನು ಆಲಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ಜನರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ನಿರಂತರವಾಗಿ ಸಾಗಲಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಈ ಸಂದರ್ಭದಲ್ಲಿ ಹೇಳಿದರು.

371 (ಜೆ) ಅಡಿಯಲ್ಲಿ ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಸಚಿವ ಸಂಪುಟದ ಉಪಸಮಿತಿ ರಚನೆ.

ಭಾರತದ ಸಂವಿಧಾನದ ಅನುಚ್ಛೇದ 371 ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿರುವ ಪ್ರಯುಕ್ತ ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿ, ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರದ ಜಂಟಿ ಕಾರ್ಯದರ್ಶಿ ( ಸಚಿವ ಸಂಪುಟ) ಆರ್. ಚಂದ್ರಶೇಖರ್ ಅವರು ಆದೇಶ ಹೊರಡಿಸಿದ್ದು ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಚಿವರಾದ ಈಶ್ವರ ಖಂಡ್ರೆ, ರಹೀಂ ಖಾನ್, ಡಾ ಶರಣಪ್ರಕಾಶ ಪಾಟೀಲ್, ಡಿ. ಸುಧಾಕರ್, ಬಿ.ನಾಗೇಂದ್ರ ಹಾಗೂ ಎನ್ ಎಸ್ ಬೋಸರಾಜ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಭಾರತದ ಸಂವಿಧಾನದ ಅನುಚ್ಛೇದ 371 ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿರುವ ಪ್ರಯುಕ್ತ ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿಯನ್ನು ಸಚಿವ ಸಂಪುಟದ ಉಪ ಸಮಿತಿ ಪರಿಶೀಲಿಸಲಿದೆ. ಸದರಿ ಸಮಿತಿಗೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಈ ಸಮಿತಿಗೆ ಅಗತ್ಯ ನೆರವು ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.