ಸರ್ಕಾರದ ಮಾರ್ಗಸೂಚಿ ಪ್ರಕಾರ ಹೊಸ ವರ್ಷಾಚರಣೆಗೆ ಅವಕಾಶ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಶಿವಮೊಗ್ಗ, ಡಿ.30: ಕರೋನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ವರ್ಷಾಚರಣೆ ಕುರಿತಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಅದರಂತೆ ಹೊಸ ವರ್ಷವನ್ನು ಆಚರಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಸಾಮಾಜಿಕ ಅಂತರವನ್ನು ಕಾಪಾಡುವ ದೃಷ್ಟಿಯಿಂದ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕ್ಲಬ್, ಪಬ್, ರೆಸ್ಟೋರೆಂಟ್ ಇತ್ಯಾದಿ ಪ್ರದೇಶಗಳಲ್ಲಿ ವಿಶೇಷ ಡಿಜೆ ಡ್ಯಾನ್ಸ್ ಕಾರ್ಯಕ್ರಮಗಳು, ವಿಶೇಷ ಪಾರ್ಟಿ ಆಯೋಜಿಸುವುದನ್ನು ನಿಷೇಧಿಸಲಾಗಿದ್ದು, ಪ್ರತಿನಿತ್ಯದ ವ್ಯವಹಾರ ನಡೆಸಲು ಯಾವುದೇ ನಿರ್ಬಂಧವಿರುವುದಿಲ್ಲ. ಈ ನಿರ್ಬಂಧ ಜನವರಿ 2ರವರೆಗೆ ಮುಂದುವರೆಯಲಿದೆ ಎಂದು ಅವರು ಹೇಳಿದ್ದಾರೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದುಗೂಡುವುದನ್ನು ನಿರ್ಬಂಧಿಸಲಾಗಿದೆ. ಬಹುಮುಖ್ಯವಾಗಿ 65ವರ್ಷ ಮೇಲ್ಪಟ್ಟ ಹಿರಿಯರು ಮತ್ತು 10ವರ್ಷದ ಒಳಗಿನ ಮಕ್ಕಳು ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ತಪ್ಪದೇ ಧರಿಸಬೇಕು. ಹೊಟೇಲ್, ಮಾಲ್ ಮುಂತಾದ ಕಡೆ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆಯನ್ನು ಮಾಡಬೇಕು. ಸಾಮಾಜಿಕ ಅಂತರವನ್ನು ಖಾತ್ರಿಪಡಿಸಲು ಅಗತ್ಯವಿದ್ದರೆ, ಜನರನ್ನು ಸರದಿಯಲ್ಲಿ ಪ್ರವೇಶಿಸಲು ಅಥವಾ ಆನ್‍ಲೈನ್ ಮುಖಾಂತರ ಸ್ಥಳ ಕಾಯ್ದಿರಿಸಲು ವ್ಯವಸ್ಥೆ ಮಾಡಬೇಕು.
ಪ್ರಾಂಗಣಗಳಲ್ಲಿ, ಉಪಾಹಾರ ಗೃಹಗಳಲ್ಲಿ, ವ್ಯವಸ್ಥಿತ ಕಟ್ಟಡ ಸಮುಚ್ಚಯಗಳಲ್ಲಿ ಜನರು ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಸರ್ಕಾರದ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಹಸಿರು ಪಟಾಕಿಗಳನ್ನು ಮಾತ್ರ ಹಚ್ಚಬೇಕು ಎಂದು ಅವರು ತಿಳಿಸಿದ್ದಾರೆ.