ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ವಹಿಸಲು ಡಿ.ಸಿ ಸೂಚನೆ

ಬೀದರ:ನ.19: ಕೋವಿಡ್-19 ಇರುವ ಸಂದರ್ಭದಲ್ಲಿ ಕಾಲೇಜುಗಳು ಆರಂಭವಾಗುತ್ತಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.

ಆಯಾ ತಾಲೂಕುಗಳಲ್ಲಿ ಇರುವ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳು ಎಷ್ಟು ಎಂಬುದರ ಬಗ್ಗೆ ತಾವುಗಳು ಮಾಹಿತಿ ಪಡೆದುಕೊಂಡು ತಮ್ಮ ಹಂತದಲ್ಲಿಯೇ ಎಲ್ಲ ಕಾಲೇಜುಗಳ ಪ್ರಾಂಶುಪಾಲರ ಸಭೆ ಕರೆದು ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಏನೇನು ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಿ ಎಲ್ಲ ಕಾಲೇಜುಗಳ ಪ್ರಾಂಶುಪಾಲರ ಮತ್ತು ಆಡಳಿತ ಮಂಡಳಿಯವರ ಸಹಕಾರ ಪಡೆದು ಕ್ರಮ ವಹಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಎಲ್ಲ ತಹಸೀಲ್ದಾರರರಿಗೆ ಸೂಚಿಸಿದರು.

ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಎಲ್ಲ ವಿದ್ಯಾರ್ಥಿಗಳೇ ಕಡ್ಡಾಯ ಕೋವಿಡ್-19 ತಪಾಸಣೆ ನಡೆಸಬೇಕು. ನೆಗಟೀವ್ ವರದಿ ಇರುವ ವಿದ್ಯಾರ್ಥಿಗಳಿಗೆ ತರಗತಿಗೆ ಪ್ರವೇಶ ನೀಡಬೇಕು. ಪಾಜಿಟೀವ್ ವರದಿ ಇರುವ ವಿದ್ಯಾರ್ಥಿಗಳಿಗೆ ವಿಳಂಬ ಮಾಡದೇ ನಿಯಮಾನುಸಾರ ಚಿಕಿತ್ಸೆಗೆ ಕ್ರಮ ವಹಿಸಬೇಕು ಎಂದು ಸಲಹೆ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗ್ಯಾನೇಂದ್ರಕುಮಾರ ಗಂಗವಾರ, ಬೀದರ ಹಾಗೂ ಬಸವಕಲ್ಯಾಣ ಸಹಾಯಕ ಆಯುಕ್ತರಾದ ಗರೀಮಾ ಪನವಾರ, ಭುವನೇಶ ಪಾಟೀಲ, ಬೀದರ ತಹಸೀಲ್ದಾರ ಗಂಗಾದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ ಹಾಗೂ ಇತರರು ಇದ್ದರು.