ಸರ್ಕಾರದ ಮಾರ್ಗಸೂಚನೆ ಪಾಲಿಸಲು ಕರೆ

ಕೋಲಾರ,ಮೇ.೪: ಕೋವಿಡ್-೧೯ ಸೋಂಕಿನ ಬಗ್ಗೆ ಯಾರೂ ಸಹ ನಿರ್ಲಕ್ಷ್ಯ ವಹಿಸದೆ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಆರೋಗ್ಯವಂತ ಜೀವನ ನಡೆಸುವಂತೆ ಮಾರ್ಜೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಜೆ ಬಾಬು ಮೌನಿ ಹೇಳಿದರು.
ತಾಲೂಕಿನ ಮಾರ್ಜೇನಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಕೋವಿಡ್-೧೯ ೨ನೆ ಅಲೆಯ ವಿಚಾರವಾಗಿ ಜಾಗೃತಿ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿ, ಗ್ರಾಮಸ್ಥರಲ್ಲಿ ರೋಗದ ಲಕ್ಷಣಗಳು ಕಂಡುಬಂದಲ್ಲಿ ಆಶಾ ಕಾರ್ಯಕರ್ತರು ನಿಗಾ ವಹಿಸಿ ಗ್ರಾಮ ಪಂಚಾಯತಿಗೆ ಮಾಹಿತಿ ನೀಡಬೇಕೆಂದು ಆಶಾ ಕಾರ್ಯಕರ್ತರಿಗೆ ಸೂಚಿಸಿದರು.
ಗ್ರಾಮ ಪಂಚಾಯತಿ ನೋಡಲ್ ಅಧಿಕಾರಿ ಡಾ.ಸುಭಾನ್ ಮಾತನಾಡಿ, ಗ್ರಾಮಗಳಲ್ಲಿ ಪ್ರತಿಯೊಬ್ಬರೂ ಸಹ ಗ್ರಾಮದ ಸ್ವಚ್ಛತೆಗೆ ಆಧ್ಯತೆ ನೀಡಿ ಆರೋಗ್ಯವಂತ ಗ್ರಾಮಗಳಾಗಿ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಹಕರಿಸಬೇಕೆಂದರು.
ಗ್ರಾಮಗಳಲ್ಲಿ ಕರೋನಾ ಮಹಾಮಾರಿ ಪ್ರಭಾವ ಗ್ರಾಮಗಳಲ್ಲಿ ಹೆಚ್ಚಾಗಿದ್ದು, ಈ ಬಗ್ಗೆ ಗ್ರಾಮ ಪಂಚಾಯತಿ ಸಿಬ್ಬಂದಿ ಬ್ಲೀಚಿಂಗ್ ಮತ್ತು ಸ್ಯಾನಿಟೀಜಿಂಗ್ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು.
ತಾಲೂಕು ಪಂಚಾಯತಿ ಅಧ್ಯಕ್ಷ ಸೂಲೂರು ಆಂಜಿನಪ್ಪ ಮಾತನಾಡಿ, ಗ್ರಾಮಸ್ಥರಲ್ಲಿ ಕೋವಿಡ್-೧೯ರ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಡ ಮಾಡದೆ ವೈದ್ಯಕೀಯ ನಿಯಮಗಳನ್ನು ಪಾಲಿಸಬೇಕು. ತಾಲೂಕು ಆರೋಗ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಈ ಕೂಡಲೇ ಮುಂಜಾಗೃತ ಕ್ರಮವಾಗಿ ಔಷಧಿಗಳನ್ನು ಪೂರೈಸಲು ಸೂಕ್ತ ಕ್ರಮ ವಹಿಸುವುದಾಗಿ ತಿಳಿಸಿದರು.
ಮಾರ್ಜೇನಹಳ್ಳಿ ಗ್ರಾಮ ಪಂಚಾಯತಿ ಪಿಡಿಓ ಕಮಲ, ಗ್ರಾಮ ಪಂಚಾಯತಿ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.