ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳ ಯಶಸ್ವಿಗೆ ಸಹಕಾರ ನೀಡಿ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೨೫; ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮೂಲಕ ಯಶಸ್ವಿಗೊಳಿಸಲು ರಾಜ್ಯ ಸರ್ಕಾರಿ ನೌಕರರು ಹೆಚ್ಚಿನ ಸಹಕಾರ ನೀಡಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಮನವಿ ಮಾಡಿದರು.ನಗರದ ತರಾಸು ರಂಗಮಂದಿರದಲ್ಲಿ  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ವತಿಯಿಂದ ಚಿತ್ರದುರ್ಗ ಜಿಲ್ಲಾ ನೂತನ ಉಸ್ತುವಾರಿ ಮಂತ್ರಿಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ನೂತನ ಶಾಸಕರುಗಳಿಗೆ ಅಭಿನಂದನಾ ಸಮಾರಂಭ ಹಾಗೂ 2022-23ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
     ನಮ್ಮ ಸರ್ಕಾರ ನೀಡಿದ ಭರವಸೆಯಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮೂಲಕ ಯೋಜನೆಗಳ ಯಶಸ್ವಿಗೆ ಸರ್ಕಾರಿ ನೌಕರರು ಹೆಚ್ಚಿನ ಸಹಕಾರ ನೀಡಬೇಕು ಎಂದರು.ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕ್ಕೆ ಮಾತ್ರ ಸೀಮಿತವಾಗದೇ ಸಾಮಾನ್ಯಕ್ಕೂ ಹೆಚ್ಚಿನ ಒತ್ತು ನೀಡುವ ಮೂಲಕ ಗಮನಹರಿಸಬೇಕು.  ಇಂದಿನ ವಿದ್ಯಾರ್ಥಿಗಳು, ಯುವ ಜನತೆ ಬಹಳಷ್ಟು ಮಂದಿ ದಿನಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಸಾಮಾನ್ಯ ಜ್ಞಾನಕ್ಕೂ ಆದ್ಯತೆ ನೀಡಬೇಕು. ಪ್ರಪಂಚ, ದೇಶ, ರಾಜ್ಯ, ಜಿಲ್ಲೆಯಲ್ಲಿ ನಡೆಯುವ ಆಗು-ಹೋಗುಗಳ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.ವಿದ್ಯೆ ಯಾರ ಸ್ವತ್ತು ಅಲ್ಲ.  ಆಧುನಿಕ ಯುಗದಲ್ಲಿ ಯಾರು ಹೆಚ್ಚು ಕಷ್ಟಪಡುತ್ತಾರೆ ಅಂತಹವರಿಗೆ ಯಶಸ್ಸು ಖಂಡಿತವಾಗಿಯೂ ದೊರೆಯಲಿದೆ. ವಿದ್ಯಾರ್ಥಿಗಳು ತಮ್ಮ ಕನಸು ನನಸು ಮಾಡಿಕೊಳ್ಳಲು ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.ನೌಕರರ ಸಂಘದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅತ್ಯುತ್ತಮ ಬೆಳವಣಿಗೆ. ಮಕ್ಕಳನ್ನು ಸನ್ಮಾನ ಮಾಡುವುದರಿಂದ ಅವರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗುತ್ತದೆ. ವಿದ್ಯಾಭ್ಯಾಸದ ಕಡೆಗೆ ಗಮನಹರಿಸಲು ಸಹಕಾರಿಯಾಗಲಿದೆ ಎಂದರು.ಶಾಸಕರಾದ ಟಿ.ರಘುಮೂರ್ತಿ ಮಾತನಾಡಿ, ಸರ್ಕಾರಿ ನೌಕರರ ವರ್ಗಕ್ಕೆ ರಾಜಕಾರಣ ಬೇಕಾಗಿಲ್ಲ. ಯಾವುದೇ ಸರ್ಕಾರವಿರಲಿ ನೌಕರರರು ಆ ಸರ್ಕಾರಕ್ಕೆ ವಿಧೇಯರಾಗಿದ್ದುಕೊಂಡು, ಇಚ್ಚಾಶಕ್ತಿ, ಪ್ರಾಮಾಣಿಕವಾಗಿ ತಮ್ಮ ಕೆಲಸ ನಿರ್ವಹಿಸಿ, ಸರ್ಕಾರಲ್ಲಿ ಒಬ್ಬರಾಗಿ ಸೇವೆ ಮಾಡುವ ಮೂಲಕ ಸಾರ್ವಜನಿಕರ ಕಾಳಜಿ ಹೊಂದಿ ಸಮಾಜ ಸೇವೆ ಸಲ್ಲಿಸಬಹುದಾಗಿದೆ ಎಂದರು.ಕಾರ್ಯಾಂಗದ ನೌಕರ ವರ್ಗದವರು, ಶಾಸಕಾಂಗದ  ವ್ಯವಸ್ಥೆಯ ಜನಪ್ರತಿನಿಧಿಗಳು ಎರಡು ಚಕ್ರಗಳಿದ್ದಂತೆ. ಈ ಎರಡು ವ್ಯವಸ್ಥೆಯನ್ನು ತಿದ್ದುವ ಕೆಲಸ ನ್ಯಾಯಾಂಗ ವ್ಯವಸ್ಥೆ ಮಾಡುತ್ತದೆ. ಸರ್ಕಾರದ ಜೊತೆಗಿದ್ದು, ನೌಕರರು ತಮ್ಮ ವೃತ್ತಿಯನ್ನು ಮಾಡಬೇಕು ಎಂದು ತಿಳಿಸಿದರು.ಇಚ್ಚಾಶಕ್ತಿ, ನಿರಂತರ ಪರಿಶ್ರಮದಿಂದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು ಎಂದು ಸರ್ಕಾರಿ ನೌಕರರ ಮಕ್ಕಳಿಗೆ ಕಿವಿಮಾತು ಹೇಳಿದ ಅವರು, ರಾಜ್ಯ ಸರ್ಕಾರಿ ನೌಕರರ ಆಶ್ವಾಸನೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮವಹಿಸಲಿಸಲಿದೆ ಎಂದು ಭರವಸೆ ನೀಡಿದರು.